ಗಣರಾಜ್ಯೋತ್ಸವ ಪ್ರಬಂಧ ಸ್ಪರ್ಧೆ: ವಿಜೇತರಿಗೆ ಮರ್ಹೂಂ ಎಂ.ಸಿ. ಇಸ್ಮಾಯೀಲ್ ಪ್ರಶಸ್ತಿ ವಿತರಣೆ

ಮಂಗಳೂರು, ಮಾ.12: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈನೇಶನ್ ಆಫ್ ಇಂಡಿಯಾ ದ.ಕ.ಜಿಲ್ಲೆ ಮತ್ತು ಭಾರತ್ ಸೋಶಿಯಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಕಸ್ಬಾ ಬೆಂಗ್ರೆಯ ಎಆರ್‌ಕೆ ಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮರ್ಹೂಂ ಎಂ.ಸಿ. ಇಸ್ಮಾಯೀಲ್ ಪ್ರಶಸ್ತಿಯನ್ನು ವಿತರಿಸಲಾಯಿತು.
ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಭಾರತ್ ಸೋಶಿಯಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ನ ನೂರುಲ್ ಅಮೀನ್ ಕೆಪಿ, ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ದೇಶದ ಪ್ರಜೆ ಎಂಬ ನೆಲೆಯಲ್ಲಿ ಪ್ರತಿಯೊಬ್ಬರೂ ಭೇದ ಭಾವ ಮರೆತು ಪರಸ್ಪರ ವಿಶ್ವಾಸದೊಂದಿಗೆ ಜೀವಿಸಿ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಪ್ರತೀ ಪ್ರಜೆಯು ಸೇವಾ ಮನೋಭಾವವನ್ನು ಬೆಳೆಸಬೇಕು. ಸೇವೆಯು ಆತ್ಮ ಸಂತೃಪ್ತಿಗಿರುವ ದಾರಿ ಎಂದರು.
ವಿಜೇತರಿಗೆ ಮರ್ಹೂಂ ಎಂ.ಸಿ. ಇಸ್ಮಾಯೀಲ್‌ರ ಪುತ್ರ ಎಂ.ಸಿ. ಅಶ್ರಫ್ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಎಸ್‌ಐಒ ಜಿಲ್ಲಾಧ್ಯಕ್ಷ ಅಶೀರುದ್ದೀನ್ ಆಲಿಯಾ, ಎಆರ್‌ಕೆ ಶಾಲೆಯ ಮುಖ್ಯ ಶಿಕ್ಷಕಿ ರಶೀದಾ ಉಪಸ್ಥಿತರಿದ್ದರು. ಕೈಫ್ ಉಳ್ಳಾಲ ಕಿರಾಅತ್ ಪಠಿಸಿದರು. ವಿಜೇತರಾದ ಸುಹಾನಾ ಸಫರ್, ನಿಹಾಲ್ ಕುದ್ರೋಳಿ, ಶ್ವೇತಾ, ಕೀರ್ತಿ, ಶಮೀನಾ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಎಸ್‌ಐಒ ಜಿಲ್ಲಾ ಕಾರ್ಯದರ್ಶಿ ಅಹ್ಮದ್ ಮುಬೀನ್, ಎಸ್‌ಐಒ ಬೆಂಗ್ರೆ ಅಧ್ಯಕ್ಷ ಅಝೀಝ್, ನಿಝಾಮ್ ಉಳ್ಳಾಲ, ರಾಝಿ ಬೆಂಗ್ರೆ ಸಹಕರಿಸಿದರು.







