ಪಿಂಗಾರ ತುಳು ಚಿತ್ರಕ್ಕೆ ಅತ್ಯುತ್ತಮ ಏಷಿಯನ್ ಚಲನಚಿತ್ರ ಪ್ರಶಸ್ತಿ
ಮಂಗಳೂರು: ಮಂಗಳೂರಿನ ಅವಿನಾಶ್ ಶೆಟ್ಟಿ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಪಿಂಗಾರ ತುಳು ಮತ್ತು ಕನ್ನಡ ಭಾಷೆಯ ಚಲನಚಿತ್ರ ಅತ್ಯುತ್ತಮ ಏಷಿಯನ್ ಚಲನ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.
ಈ ಚಿತ್ರ ಬೆಂಗಳೂರಿನಲ್ಲಿ ನಡೆಯಲಿರುವ 12ನೆ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರ ಸ್ಪರ್ಧೆ ವಿಭಾಗ ಹಾಗೂ ಭಾರತೀಯ ಚಲನಚಿತ್ರ ವಿಭಾಗ ಎಂಬ ಎರಡು ವಿಭಾಗಗಳಲ್ಲಿ ಆಯ್ಕೆಯಾಗಿದೆ ಎಂದು ಚಿತ್ರದ ನಿರ್ಮಾಪಕ ಅವಿನಾಶ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪಿಂಗಾರ ಚಲನಚಿತ್ರ ಕರ್ನಾಟಕ ಕರಾವಳಿಯ ತುಳು ನಾಡಿನ ದೈವಾರಾಧನೆ ನಂಬಿಕೆ ಆಚರಣೆ ಹಾಗೂ ಅದರ ಸುತ್ತ ಹೆಣೆದುಕೊಂಡಿರುವ ಜನರ ಸಂಸ್ಕೃತಿ ನಂಬಿಕೆಗಳ ಬದುಕಿನ ಕಥೆಯನ್ನು ಒಳಗೊಂಡಿದೆ. ತುಳು ನಾಡಿನಲ್ಲಿ ದೈವಗಳ ಆರಾಧನೆಯಲ್ಲಿ ಸತ್ಯ, ನ್ಯಾಯಕ್ಕೆ ಒತ್ತು ನೀಡುತ್ತಾ ಪ್ರಕೃತಿ ಮನುಷ್ಯ ಅಹಂನ್ನೂ ಮೀರಿ ಅದಕ್ಕೆ ಉತ್ತರ ನೀಡುವ ದೈವದ ಸಂದೇಶದ ಕಥೆಯನ್ನು ಈ ಚಲನಚಿತ್ರ ಒಳಗೊಂಡಿದೆ.
ಕರಾವಳಿಯಲ್ಲಿ ದಲಿತ ಜಾತಿಯವರು ದೈವ ಪಾತ್ರಿಗಳಾಗಿರುವ ಸಂದರ್ಭದಲ್ಲಿ ಮೇಲ್ಜಾತಿಯವರಿಂದ ದೈವದ ಸ್ಥಾನದ ಮನ್ನಣೆ ಪಡೆಯುತ್ತಾರೆ. ಇದೇ ಕಥೆಯನ್ನು ಹೊಂದಿದೆ ತಪ್ಪಿತಸ್ಥ ಮನೋಭಾವದ ಮೂರು ಮೇಲ್ಜಾತಿಯ ವ್ಯಕ್ತಿಗಳ ಬದುಕಿನಲ್ಲಿ ದೈವದ ನುಡಿಯ ಬಳಿಕ ಆಗುವ ಈ ಚಲನ ಚಿತ್ರ ಕಾರ್ಕಳದ ಬೈಲೂರು ಸೇರಿದಂತೆ ಬಹುತೇಕನ ಕರಾವಳಿಯ ಭಾಗದಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರದ ನಿರ್ದೇಶನ ಮಾಡಿರುವ ಪ್ರೀತಂ ಶೆಟ್ಟಿಯವರು ಮೂಲತಃ ಕರಾವಳಿಯವರು. ಚಿತ್ರದ ತಾರಾಗಣದಲ್ಲಿ ರಂಗಭೂಮಿಯ ಹಿನ್ನೆಲೆಯ ಕಲಾವಿದರುಗಳಾದ ನೀಮಾರೇ, ಶರಣ್ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ಸೀಂಚನಾ ಚಂದ್ರ ಮೋಹನ್, ಸುನಿಲ್ ನೆಲ್ಲಿಗುಡ್ಡೆ ಹಾಗೂ ಪ್ರಶಾಂತ್ ಸಿ.ಕೆ. ಅಭಿನಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಆರ್.ಪ್ರೀತಂ ಶೆಟ್ಟಿ,ಚಿತ್ರ ತಂಡದ ಸದಸ್ಯರಾದ ಪವನ್ ಕುಮಾರ್, ರಂಜಿತ್ ಕುಮಾರ್ , ಪ್ರಶಾಂತ್ ಸಿ.ಕೆ, ಶರಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







