ಹಾಸನ: ನಿರ್ಮಾಣ ಹಂತದ ಮೇಲ್ಸೇತುವೆ ಕುಸಿತ
ಕಳಪೆ ಕಾಮಗಾರಿ ಆರೋಪ, ತನಿಖೆಗೆ ಡಿಸಿ ಸೂಚನೆ

ಹಾಸನ, ಮಾ.12: ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದು ಬಿದ್ದಿರುವ ಘಟನೆ ಹಾಸನದಲ್ಲಿ ನಡೆದಿದ್ದು, ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
ಹಾಸನದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದಿಂದ ಎನ್.ಆರ್.ವೃತ್ತದವರೆಗೆ ನಿರ್ಮಾಣವಾಗುತ್ತಿದ್ದ ಮೇಲ್ಸೇತುವೆ ಕುಸಿದು ಬಿದ್ದಿದ್ದು, ಕಾಮಗಾರಿ ನಡೆಯುತ್ತಿರುವಾಗಲೇ ಮೇಲ್ಸೇತುವೆ ಉರುಳಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
ರೈಲ್ವೆ ಇಲಾಖೆ ಮತ್ತು ರಾಜ್ಯ ಸರಕಾರ ಸೇರಿ 82 ಕೋಟಿ ರೂ. ಗಳ ವೆಚ್ಚದಲ್ಲಿ ಈ ಮೇಲ್ಸೇತುವೆ ನಿರ್ಮಾಣ ಮಾಡಲು ಮುಂದಾಗಿತ್ತು. ಹಲವು ವರ್ಷಗಳ ಬೇಡಿಕೆ ಬಳಿಕ ಸಮ್ಮಿಶ್ರ ಸರಕಾರದಲ್ಲಿ ಸೇತುವೆ ಕಾಮಗಾರಿ ಮಾಡಲು ಅನುಮೋದನೆ ಕೊಡಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕುಸಿದಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸ್ಥಳಕ್ಕಾಗಮಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ರವರು ತನಿಖೆಗೆ ಸ್ಥಳದಲ್ಲಿಯೇ ಸೂಚನೆ ನೀಡಿದ್ದಾರೆ. ಕಾಮಗಾರಿ ಎಂದರೆ ಸುರಕ್ಷತೆ ಮತ್ತು ಗುಣಮಟ್ಟದ ಕೆಲಸ ಮುಖ್ಯ. ಆದರೆ ಸೇತುವೆ ಕಾಮಗಾರಿ ವೇಳೆಯೇ ಕುಸಿದಿದ್ದು, ಈ ಬಗ್ಗೆ ವಿವರವಾದ ತನಿಖೆ ಮಾಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.





