ಭಟ್ಕಳ: ಸಂವಿಧಾನ ರಕ್ಷಣೆಗೆ ಸರ್ವತ್ಯಾಗಕ್ಕೂ ಸಿದ್ಧ: ಮುಝಮ್ಮಿಲ್ ಕಾಝಿಯಾ
ಎನ್.ಪಿ.ಆರ್ ಕೈಬಿಡುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ

ಭಟ್ಕಳ: ಮನೆಗಣತಿ, ಜನಗಣತಿಗೆ ನಮ್ಮ ವಿರೋಧವಿಲ್ಲ, ಜನಗಣತಿಯ ಹೆಸರಲ್ಲಿ ಎನ್.ಪಿ.ಆರ್ ಮತ್ತು ಎನ್.ಆರ್.ಸಿ ನಡೆಸಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು ಅವರ ಉದ್ದೇಶ ಸರಿಯಿಲ್ಲ. ದೇಶ ಹಾಗೂ ದೇಶದ ಸಂವಿಧಾನ ರಕ್ಷಣೆಗಾಗಿ ನಾವು ಸರ್ವತ್ಯಾಗಕ್ಕೂ ಸಿದ್ಧ ಎಂದು ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ನೂತನ ಅಧ್ಯಕ್ಷ ಹಾಗೂ ತಂಝೀಮ್ ನ ಮಾಜಿ ಅಧ್ಯಕ್ಷ ನ್ಯಾಯಾವಾದಿ ಮುಝಮ್ಮಿಲ್ ಕಾಝಿಯಾ ಹೇಳಿದರು.
ಅವರು ಗುರುವಾರ ಕರ್ನಾಟಕದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್.ಪಿ.ಆರ್)ನ್ನು ಕೈಬಿಟ್ಟು ನಾಡಿನ ಜನತೆಯ ಸಂವಿಧಾನಾತ್ಮಕ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಕರ್ನಾಟಕ ಜಂಟಿ ಕ್ರಿಯಾ ಸಮಿತಿ, ಸಂವಿಧಾನ ಉಳಿಸಿ ವೇದಿಕೆಗಳು ಹಾಗೂ ಸ್ಥಳಿಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿನ ತಹಶಿಲ್ದಾರ್ ಕಚೇರಿ ಎದುರು ಧರಣಿ ನಿರತ ಸತ್ಯಾಗ್ರಹಿಗಳನ್ನುದ್ದೇಶಿಸಿ ಮಾತನಾಡಿದರು.
ನಂತರ ತಹಶೀಲ್ದಾರ್ ವಿ.ಪಿ.ಕೊಟ್ರಳ್ಳಿಯವರ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕದಲ್ಲಿ ಎನ್.ಪಿ.ಆರ್ ನ್ನು ಜಾರಿ ಮಾಡುವ ಮೂಲಕ ಎನ್.ಆರ್.ಸಿ ಜಾರಿ ಮಾಡುವುದು ಮತ್ತು ಈ ನೆಲದ ಮಕ್ಕಳನ್ನೂ ಪರದೇಶಿಗಳನ್ನಾಗಿಸುವುದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಕರ್ನಾಟಕದ ಮುಖ್ಯಮಂತ್ರಿಯಾಗಿ ತಾವು ಅದಕ್ಕೆ ಅವಕಾಶ ಮಾಡಿಕೊಡಬಾರದೆಂದು ಆಗ್ರಹಿಸತ್ತೇವೆ. ಆದ್ದರಿಂದ ಜನಗಣತಿಯ ಜೊತೆಗೆ ಕರ್ನಟಕದಲ್ಲಿ ಎನ್.ಪಿ.ಆರ್ ಜಾರಿ ಮಾಡುವುದಿಲ್ಲ ಎಂದು ತಾವು ಕೂಡಲೇ ಘೋಷಿಸಬೇಕೆಂದು ಮನವಿ ಪತ್ರದಲ್ಲಿ ಕೋರಲಾಗಿದೆ.
ಧರಣಿ ನಿರತರನ್ನುದ್ದೇಶಿಸಿ ತಂಝಿಮ್ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೇಝ್, ಪ್ರಧಾನ ಕಾರ್ಯದರ್ಶಿ ಎಂ.ಜೆ.ಅಬ್ದುಲ್ ರಖೀಬ್, ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಇನಾಯತುಲ್ಲಾ ಶಾಬಂದ್ರಿ, ಸಾಮಾಜಿಕ ಕಾರ್ಯಕರ್ತ ಡಾ.ಎಂ.ಎಂ.ಹನೀಫ್ ಶಬಾಬ್, ನ್ಯಾಯಾವಾದಿ ಇಮ್ರಾನ್ ಲಂಕಾ, ಮರ್ಕಝಿ ಖಲಿಫಾ ಜಮಾಆತುಲ್ ಮುಸ್ಲಿಮೀನ್ ಪ್ರಧಾನ ಕಾಝಿ ಮೌಲಾನ ಕ್ವಾಜಾಮುಹಿದ್ದೀನ್ ಅಕ್ರಮಿ ಮದನಿ ನದ್ವಿ, ಮಾತನಾಡಿದರು. ಜಾಲಿ ಪಂಚಾಯತ್ ಮಾಜಿ ಅಧ್ಯಕ್ಷ ಆದಂ ಪಣಂಬೂರು ಮನವಿ ಪತ್ರವನ್ನು ಓದಿದರು.
ಧರಣಿಯಲ್ಲಿ ಸಂಚಲಾಕ ಜಮಾಅತೆ ಇಸ್ಲಾಮಿ ಹಿಂದ್ ಉ.ಕ ಜಿಲ್ಲಾ ಸಂಚಾಲಕ ಮುಹಮ್ಮದ್ ತಲ್ಹಾ ಸಿದ್ದಿಬಾಪ, ಮುಜಾಹಿದ್ ಮುಸ್ತಫಾ, ಯೂನೂಸ್ ರುಕ್ನದ್ದೀನ್, ಅಬ್ದುಲ್ ರಖೀಬ್ ಎಂ.ಜೆ, ತೌಫೀಖ್ ಬ್ಯಾರಿ, ಮುನೀರ್ ಆಹ್ಮದ್, ಅಶ್ಫಾಖ್ ಕೆ.ಎಂ, ಪರ್ವೇಝ್ ಕಾಶಿಮಜಿ ಶೌಕತ್ ಕತೀಬ್ ಮೌಲಾನ ಸೈಯ್ಯದ್ ಝುಬೈರ್, ಖಮರುದ್ದೀನ್ ಮಷಾಯಿಖ್, ರಾಬಿತಾ ಸೂಸೈಟಿಯ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಿದ್ದಿನ್ ರುಕ್ನುದ್ದೀನ್ ಕೊಚ್ಚಾಪ್ಪೊ, ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಪುರಸಭೆಯ ಮಾಜಿ ಅಧ್ಯಕ್ಷ ಮುಹಮ್ಮದ್ ಸಾದಿಖ್ ಮಟ್ಟಾ, ನಿಸಾರ್ ರುಕ್ನುದ್ದೀನ್ ಮತ್ತಿತರರು ಭಾಗವಹಿಸಿದ್ದರು.



















