ರೈತರಿಗೆ 9 ಗಂಟೆ ವಿದ್ಯುತ್ ಪೂರೈಕೆ ಸಾಧ್ಯವಿಲ್ಲ: ಸಿಎಂ ಯಡಿಯೂರಪ್ಪ

ಬೆಂಗಳೂರು, ಮಾ.12: ರೈತರ ಕೃಷಿ ಚುಟವಟಿಕೆಗಳಿಗಾಗಿ ದಿನಕ್ಕೆ 9 ಗಂಟೆ ವಿದ್ಯುತ್ ಪೂರೈಸಲು ಸಾಧ್ಯವಿಲ್ಲ. ಇದಕ್ಕೆ, ಅನೇಕ ತಾಂತ್ರಿಕ ಕಾರಣಗಳಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗುರುವಾರ ವಿಧಾನ ಪರಿಷತ್‌ನಲ್ಲಿ ಮಧ್ಯಾಹ್ನ ಭೋಜನ ನಂತರ ಆರಂಭವಾದ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಮಾನೆ ಶ್ರೀನಿವಾಸ್ ಅವರು, ರಾಜ್ಯದಲ್ಲಿ ರೈತರ ಹೊಲಗಳಿಗೆ ಅಳವಡಿಸಲಾಗಿರುವ ಟಿಸಿಗಳು ಓವರ್ ಲೋಡ್ ಆಗಿ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಸರಕಾರದ ಗಮನಕ್ಕೆ ಬಂದಿದೆಯೇ ಪ್ರಶ್ನೆಗೆ ಅವರು ಉತ್ತರಿಸಿದರು.
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಅಳವಡಿಸಲಾಗಿರುವ ಪರಿವರ್ತನೆಗಳು ಅಧಿಕ ವಿದ್ಯುತ್ ಹೊರೆ ಹಾಗೂ ಇತರೆ ಕಾರಣಗಳಿಂದ ವಿಫಲವಾಗುತ್ತಿರುವುದು ವಿದ್ಯುತ್ ಸರಬರಾಜು ಕಂಪೆನಿಗಳ ಗಮನಕ್ಕೆ ಬಂದಿದೆ. ಅಲ್ಲದೆ, ಕೆಲವರು 7ಎಚ್‌ಪಿ ಬದಲು 15 ಎಚ್‌ಪಿ ಪಂಪ್‌ಸೆಟ್‌ಗಳನ್ನು ಬಳಕೆ ಮಾಡುತ್ತಿರುವುದು ಟಿಸಿ ಸಮಸ್ಯೆಗೆ ಒಂದು ಕಾರಣವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಅಲ್ಲದೆ, ಸರಕಾರ ಪ್ರತಿ ದಿನ 7 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಲ್ಪಿಸಲಿದೆ. ಆದರೆ, 120 ಕಡೆ ವಿದ್ಯುತ್ ಸಮಸ್ಯೆ ಇರುವುದು ನಿಜ. ಈ ಸಮಸ್ಯೆ ಅನ್ನು ಶೀಘ್ರದಲ್ಲಿಯೇ ಬಗೆಹರಿಸಲು ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಹಿರಿಯ ಸದಸ್ಯ ಕೆ.ಸಿ.ಕೊಂಡಯ್ಯ, ಏಪ್ರಿಲ್-ಮೇ ತಿಂಗಳಿನಲ್ಲಿ 9 ಗಂಟೆ ವಿದ್ಯುತ್ ಸಂಪರ್ಕ ದೊರೆತರೆ, ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಆಗುತ್ತದೆ ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಬಿ.ಎಸ್.ಯಡಿಯೂರಪ್ಪ, 9 ಗಂಟೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ. ಇದಕ್ಕೆ ಅನೇಕ ತಾಂತ್ರಿಕ ಕಾರಣಗಳಿದ್ದು, 7 ಗಂಟೆ ಕಾಲವೂ ನಿರಂತರ ವಿದ್ಯುತ್ ಇರುವಂತೆ ಮಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ತದನಂತರ ಜೆಡಿಎಸ್ ಸದಸ್ಯರು, ಅನೇಕ ಬಾರಿ ರಾತ್ರಿ ವೇಳೆ ವಿದ್ಯುತ್ ನೀಡುತ್ತಾರೆ. ಇದರಿಂದ ರೈತರಿಗೆ ಹೊಲಕ್ಕೆ ಹೋದರೆ, ಕಾಡು ಪ್ರಾಣಿಗಳಿಂದ ದಾಳಿ ನಡೆಯುತ್ತಿದೆ ಎಂದು ಸದನದ ಗಮನ ಸೆಳೆದರು.







