ಸಚಿವ ಸುಧಾಕರ್-ರಮೇಶ್ ಕುಮಾರ್ ವಿಷಾದ: ಹಕ್ಕುಚ್ಯುತಿ ಪ್ರಸ್ತಾಪವನ್ನು ಕೈ ಬಿಟ್ಟ ಸ್ಪೀಕರ್

ಬೆಂಗಳೂರು, ಮಾ.12: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಡಾ.ಕೆ.ಸುಧಾಕರ್ ಹಾಗೂ ಕೆ.ಜಿ.ಬೋಪಯ್ಯ ಸೇರಿದಂತೆ ಇನ್ನಿತರರು ಮಂಡಿಸಿದ್ದ ಹಕ್ಕುಚ್ಯುತಿ ಪ್ರಸ್ತಾಪಗಳನ್ನು ಕೈ ಬಿಟ್ಟಿರುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತೀರ್ಮಾನ ಪ್ರಕಟಿಸಿದರು.
ಗುರುವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಹಕ್ಕುಚ್ಯುತಿ ಮಂಡನೆ ಪ್ರಸ್ತಾಪದ ಮೇಲೆ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೆ.ಸುಧಾಕರ್, ನಾನು ಸ್ಪೀಕರ್ ಪೀಠಕ್ಕೆ ಅಗೌರವ ತೋರಿಲ್ಲ, ತೋರುವುದು ಇಲ್ಲ. ಒಂದು ವೇಳೆ ನನ್ನ ಮಾತುಗಳಿಂದ ತಪ್ಪಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಆ ಪೀಠದಲ್ಲಿ ಕುಳಿತು ಪೂರ್ವಗ್ರಹಪೀಡಿತರಾಗಿ ರಮೇಶ್ ಕುಮಾರ್ ನಮ್ಮನ್ನು ಅನರ್ಹ ಮಾಡಿದರು. ನಾವು ಸುಪ್ರೀಂಕೋರ್ಟ್ ಮೊರೆ ಹೋದೆವು. 6-7 ತಿಂಗಳು ನಾವು ಅತಂತ್ರ ಸ್ಥಿತಿಯಲ್ಲಿದ್ದೆವು. ನಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತಿತ್ತು. ಮಾಧ್ಯಮಗಳು ನಮ್ಮನ್ನು ಅನರ್ಹ ಶಾಸಕರು ಎಂದು ಬಿಂಬಿಸಿದವು ಎಂದು ಸುಧಾಕರ್ ಹೇಳಿದರು.
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪೀಕರ್ ನಡವಳಿಕೆ, ಅಧಿಕಾರ ವ್ಯಾಪ್ತಿ ಬಗ್ಗೆ ಉಲ್ಲೇಖಿಸಿದೆ ಎಂದು ಸುಧಾಕರ್ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಶಾಸಕರ ಅನರ್ಹತೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಸುಪ್ರೀಂಕೋರ್ಟ್ ಆದೇಶವನ್ನು ಇಲ್ಲಿ ಚರ್ಚೆ ಮಾಡಬೇಕೆ? ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ವಿ.ಸೋಮಣ್ಣ, ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದೆ. ಸಿದ್ದರಾಮಯ್ಯ ಕೂಡ ಜೆಡಿಎಸ್‌ಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಬಂದರು. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ರಾಜೀನಾಮೆ ನೀಡುವ ಹಕ್ಕು ಶಾಸಕರಿಗಿದೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡುವ ಸಂದರ್ಭದಲ್ಲಿ ಸ್ಪೀಕರ್ ಸ್ಥಾನದಲ್ಲಿದ್ದ ರಮೇಶ್ ಕುಮಾರ್ ಆಡಿರುವ ಮಾತುಗಳನ್ನು ಸುಧಾಕರ್ ಉಲ್ಲೇಖಿಸಿದರು. ಈ ವೇಳೆ ಆಡಳಿತ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ವಾಗ್ವಾದಗಳು ನಡೆದವು.
1979ರಿಂದ ಈ ಸದನದ ಸದಸ್ಯರಾಗಿರುವವರು ನನ್ನ ಮೇಲೆ ಪ್ರಹಾರ ಮಾಡಲು ಬಂದರು. ಅವರು ಬಳಸಿದ ಪದವನ್ನು ಬಳಸಿಲ್ಲ ಎನ್ನುವುದಾದರೆ ನೂರು ಸುಳ್ಳುಗಳ ಜೊತೆ ಇನ್ನೊಂದು ಸುಳ್ಳು ಸೇರ್ಪಡೆಯಾಗಲಿ. ಆದರೆ, ಆತ್ಮಸಾಕ್ಷಿಗೆ ವಂಚನೆ ಮಾಡಲು ಸಾಧ್ಯವಿಲ್ಲ. ಪಕ್ಷಾತೀತವಾಗಿ ಪ್ರತಿಯೊಬ್ಬ ನಾಯಕರು ಆ ಪದ ಬಳಕೆಯನ್ನು ಖಂಡಿಸಬೇಕು ಎಂದು ಸುಧಾಕರ್ ಹೇಳಿದರು.
ಯಾವ ಪಕ್ಷದ ವಿರುದ್ಧ ನಾವು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದೀವೋ, ಅವರ ಜೊತೆಯೇ ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಸರಕಾರ ರಚನೆ ಮಾಡಿದಾಗ ನಮಗೆ ಆದ ಕಿರುಕುಳ, ನೋವು ಯಾರಿಗೆ ತಿಳಿಸಬೇಕು. ನಾವು ಹಣಕ್ಕಾಗಿ ಮಾರಾಟವಾಗಿಲ್ಲ, ಹೋರಾಟಕ್ಕಾಗಿ ಪಕ್ಷ ತ್ಯಜಿಸಿದ್ದು ಎಂದು ಅವರು ಹೇಳಿದರು.
ನಂತರ ಮಾತನಾಡಿದ ಶಾಸಕ ರಮೇಶ್ ಕುಮಾರ್, ಸುಧಾಕರ್ ಉಲ್ಲೇಖಿಸಿದ ನನ್ನ ಯಾವ ಮಾತುಗಳನ್ನು ಅಲ್ಲಗಳೆಯುವುದಿಲ್ಲ. ನಾನು ಆಕ್ಷೇಪಾರ್ಹ ಪದ ಬಳಸಿಲ್ಲ. ಹಾಗೊಂದು ವೇಳೆ ಬಳಸಿದ್ದೇನೆ ಎಂದು ಅವರು ತಿಳಿದಿದ್ದರೆ, ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು. ನನ್ನನ್ನು ಸದಸ್ಯತ್ವದಿಂದ ವಜಾಗೊಳಿಸಿದರೆ ಅದು ನನ್ನ ಕುಟುಂಬದ ಮೇಲೆ ಮಾಡುವ ದೊಡ್ಡ ಉಪಕಾರ. ಇಲ್ಲ ಈ ಅಧಿವೇಶನ ಮುಗಿಯುವವರೆಗೆ ಅಮಾನತ್ತು ಮಾಡುವುದಾದರೆ, ನನಗೆ ಸ್ವಲ್ಪ ಕೆಲಸಗಳಿವೆ ಅದನ್ನು ಮುಗಿಸಿಕೊಂಡು ಬರುತ್ತೇನೆ ಎಂದು ಅವರು ಹೇಳಿದರು.
ಇನ್ನೊಬ್ಬ ಸದಸ್ಯ ನನ್ನನ್ನು ಕೊಲೆಗಳನ್ನು ಮಾಡಿಸಿದ್ದಾರೆ ಎಂದು ಆಪಾದಿಸಿದರು. ಹೌದು ನಾನು ಕೊಲೆಗಳನ್ನು ಮಾಡಿಸಿದ್ದೇನೆ, ಲೂಟಿಯನ್ನು ಮಾಡಿದ್ದೇನೆ, ಭಂಡಾರ ತೆಗೆದುಕೊಂಡು ಹೋಗಿ, ಇಲ್ಲಿ ಜಾಗವಿಲ್ಲದೆ ವಿದೇಶಗಳಲ್ಲಿ ಇಟ್ಟಿದ್ದೇನೆ. ಏನು ಮಾಡುವುದು ಇಲ್ಲಿ ಬ್ಯಾಂಕುಗಳ ಪರಿಸ್ಥಿತಿ ಈ ರೀತಿಯಾಗಿದೆ ಎಂದು ರಮೇಶ್ ಕುಮಾರ್ ತಿಳಿಸಿದರು.
ಸಿದ್ದರಾಮಯ್ಯ, ಸುಧಾಕರ್ ಹಾಗೂ ಕೆ.ಜಿ.ಬೋಪಯ್ಯ ನೀಡಿರುವ ಹಕ್ಕುಚ್ಯುತಿ ಪ್ರಸ್ತಾಪಗಳಿಗೆ ಸಂಬಂಧಿಸಿದಂತೆ ನನ್ನ ತೀರ್ಪನ್ನು ಕಾಯ್ದಿರಿಸಿದ್ದೇನೆ ಎಂದು ಸ್ಪೀಕರ್ ಕಾಗೇರಿ ಹೇಳಿದರು. ಈ ವೇಳೆ, ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಇಬ್ಬರು ವಿಷಾದ ವ್ಯಕ್ತಪಡಿಸಿರುವುದರಿಂದ, ಹಕ್ಕುಚ್ಯುತಿ ವಿಚಾರವನ್ನು ಮುಕ್ತಾಯಗೊಳಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಆನಂತರ, ಸ್ಪೀಕರ್ ಸದನದ ಸಹಮತಿಯಂತೆ ಹಕ್ಕುಚ್ಯುತಿ ಪ್ರಸ್ತಾಪವನ್ನು ಕೈ ಬಿಟ್ಟಿರುವುದಾಗಿ ತೀರ್ಪು ಪ್ರಕಟಿಸಿದರು.
ಹಣಕ್ಕಾಗಿ ನಮ್ಮ 17 ಜನರ ಪೈಕಿ ಯಾರಾದರೂ ಮಾರಾಟವಾಗಿದ್ದರೆ ಎಲ್ಲರ ಎದುರು ನಾನು ನೇಣು ಹಾಕಿಸಿಕೊಳ್ಳಲು ಸಿದ್ಧವಾಗಿದ್ದೇನೆ. ಕೆಲವರು ನಾನೊಬ್ಬನೆ ಶ್ರೀರಾಮಚಂದ್ರ, ಸತ್ಯವಂತ ಎಂದು ತಿಳಿದುಕೊಂಡಿದ್ದಾರೆ. ನಮಗೆ ಯಾವ ರಾಜಕೀಯ ಹಿನ್ನೆಲೆಯೂ ಇಲ್ಲ. ಜನರ ಪ್ರೀತಿ, ವಿಶ್ವಾಸಗಳಿಸಿದ ಕಾರಣಕ್ಕಾಗಿ ಇವತ್ತು ಈ ಸದನದಲ್ಲಿದ್ದೇವೆ.
-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ







