ಕೊರೋನ ವೈರಸ್: ಸುಳ್ಳು ಹರಡುವವರ ವಿರುದ್ಧ ಕಾನೂನು ಕ್ರಮಕ್ಕೆ ಆಯುಕ್ತರಿಗೆ ಶ್ರೀರಾಮುಲು ಪತ್ರ

ಬೆಂಗಳೂರು, ಮಾ. 12: ಕೊರೋನ ವೈರಸ್ ಸೋಂಕಿನಂತಹ ಗಂಭೀರ ವಿಷಯದಲ್ಲಿ, ನನ್ನ ಹೆಸರು ಬಳಸಿ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು, ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಗುರುವಾರ ಈ ಸಂಬಂಧ ಪತ್ರ ಬರೆದಿರುವ ಶ್ರೀರಾಮುಲು, ಮಾ.1ರಂದು ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರಿನಲ್ಲಿ ನಾನು ಟ್ವೀಟ್ ಮಾಡಿರುವ ರೀತಿಯಲ್ಲಿ 'ಗಂಜಲ ಕುಡಿಯುವುದು ಹಾಗೂ ಸಗಣಿಯನ್ನು ದೇಹಕ್ಕೆ ಸವರಿಕೊಳ್ಳುವುದರಿಂದ ಕೊರೋನ ವೈರಸ್‌ನ ತಡೆಗಟ್ಟಬಹುದು ಎಂಬುದಾಗಿ ದುಷ್ಕರ್ಮಿಗಳು ಪ್ರಕಟಿಸಿದ್ದಾರೆ. ಸದರಿ ವಿಷಯದ ಬಗ್ಗೆ ನಾನು ಯಾವುದೇ ಟ್ವೀಟ್ ಮಾಡಿಲ್ಲ. ಇದರಿಂದ ನನ್ನ ಮೇಲೆ ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ವ್ಯಕ್ತವಾಗಿರುವುದಲ್ಲದೆ, ತಪ್ಪ ಸಂದೇಶ ತಲುಪಿಸಿದಂತಾಗಿರುತ್ತದೆ. ನನ್ನ ತೇಜೋವಧೆ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ.
ಕೊರೋನ ವೈರಸ್ ಸೋಂಕಿನ ಸಮಯದಲ್ಲಿ ನಾಗರಿಕರಿಗೆ ಸರಿಯಾದ ಮಾಹಿತಿ ನೀಡಿ, ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಬೇಕೆ ಹೊರತು, ಗೊಂದಲ ಸೃಷ್ಟಿಸುವ ಪ್ರಯತ್ನಕ್ಕೆ ಯಾರೂ ಕೈಹಾಕಬೇಡಿ ಎಂದು ಶ್ರೀರಾಮುಲು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.





