ಬ್ಯಾಂಕ್ಗಳಿಂದ ರೂ. 55 ಲಕ್ಷ ವಿತ್ಡ್ರಾ ಮಾಡಿ ಪ್ರತಿಭಟಿಸಿದ ತಮಿಳುನಾಡಿನ ಸಿಎಎ ಪ್ರತಿಭಟನಾಕಾರರು
ಕಕ್ಕಾಬಿಕ್ಕಿಯಾದ ಎರಡು ಬ್ಯಾಂಕ್ ಶಾಖೆಗಳು

ಸಾಂದರ್ಭಿಕ ಚಿತ್ರ
ಪುದುಕ್ಕೊಟ್ಟೈ: ತಮಿಳುನಾಡಿನ ಕರಂಬಕುಡಿ ಎಂಬಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಪ್ರತಿಭಟನೆ ವಿಶಿಷ್ಟ ತಿರುವು ಪಡೆದಿದ್ದು ಅಲ್ಲಿನ ಎರಡು ರಾಷ್ಟ್ರೀಕೃತ ಬ್ಯಾಂಕುಗಳಾದ ಇಂಡಿಯನ್ ಬ್ಯಾಂಕ್ ಹಾಗೂ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಶಾಖೆಗಳೆದುರು ಸಾಲುಗಟ್ಟಿ ನಿಂತ ಮಹಿಳೆಯರೂ ಸೇರಿದಂತೆ ನೂರಾರು ಪ್ರತಿಭಟನಾಕಾರರು ತಮ್ಮ ಖಾತೆಗಳಿಂದ ಒಟ್ಟು ರೂ. 55 ಲಕ್ಷ ವಿತ್ಡ್ರಾ ಮಾಡಿದ್ದಾರೆ. ಇದರಿಂದ ಎರಡೂ ಶಾಖೆಗಳಲ್ಲಿ ನಗದು ಕೊರತೆ ಎದುರಾಗಿ ಶಾಖಾ ಮ್ಯಾನೇಜರುಗಳು ಸರತಿಯಲ್ಲಿ ನಿಂತವರನ್ನು ಸಮಾಧಾನಿಸಲು ಹರಸಾಹಸ ಪಡಬೇಕಾಯಿತು.
ಎರಡು ಬ್ಯಾಂಕುಗಳ ಶಾಖೆಗಳ ಪೈಕಿ ಇಂಡಿಯನ್ ಬ್ಯಾಂಕ್ ಶಾಖೆಯೆದುರಿನ ಸರತಿ ಭಾರೀ ದೂರದ ತನಕ ಇತ್ತು. ಹಲವಾರು ಗ್ರಾಹಕರು ತಮ್ಮ ಕೈಗಳಲ್ಲಿ ಹಿಡಿದಿದ್ದ ಭಿತ್ತಿಪತ್ರಗಳಲ್ಲಿ ಇದು ಸಿಎಎ ವಿರುದ್ಧ 'ಕ್ಯಾಶ್ ವಿತ್ಡ್ರಾ ಮಾಡುವ ಪ್ರತಿಭಟನೆ' ಎಂದು ಬರೆಯಲಾಗಿತ್ತು.
ಹಲವು ಪ್ರತಿಭಟನಾಕಾರರು ತಮ್ಮ ಖಾತೆಗಳಿಂದ ಹಣ ವಿತ್ಡ್ರಾ ಮಾಡಿದರೆ ಇನ್ನು ಕೆಲವರು ನಿರಖು ಠೇವಣಿಗಳನ್ನು ಬಂದ್ ಮಾಡಿದ್ದರು. ಕೊನೆಗೆ ಶಾಖಾ ಸಿಬ್ಬಂದಿಗೆ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದೆ ಎರಡೂ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಅಲ್ಲಿಗೆ ಆಗಮಿಸಿದ್ದರು.







