ಮಧ್ಯಪ್ರದೇಶ ಬಿಕ್ಕಟ್ಟು: ಬಹುಮತ ಸಾಬೀತಿಗೆ ಸಿದ್ಧ ಎಂದ ಕಮಲನಾಥ್

ಭೋಪಾಲ, ಮಾ.13: ಮಾರ್ಚ್ 16ರಂದು ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ತಮ್ಮ ಸರಕಾರ ವಿಶ್ವಾಸಮತ ಯಾಚಿಸಲು ಸಿದ್ಧವಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಹೇಳಿದ್ದಾರೆ.
ಬಿಜೆಪಿಯು ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದ್ದು 19 ಕಾಂಗ್ರೆಸ್ ಶಾಸಕರನ್ನು ಬಂಧನದಲ್ಲಿಟ್ಟುಕೊಂಡಿದೆ ಎಂದು ಶುಕ್ರವಾರ ರಾಜ್ಯಪಾಲ ಲಾಲ್ಜಿ ಟಂಡನ್‌ರನ್ನು ಭೇಟಿ ಮಾಡಿದಾಗ ಅವರಿಗೆ ತಿಳಿಸಿದ್ದೇನೆ. ಸ್ವಾತಂತ್ರ್ಯ ಇದ್ದರೆ ಮಾತ್ರ ವಿಶ್ವಾಸಮತ ಯಾಚಿಸಬಹುದು. ಆದರೆ 19 ಶಾಸಕರು ಬಂಧನದಲ್ಲಿರುವಾಗ ಸ್ವಾತಂತ್ರ್ಯ ಎಲ್ಲಿದೆ . ಈ ಶಾಸಕರು ಮರಳಿ ಬರುತ್ತಾರೆ ಎಂದು ಕೆಲವರು ಹೇಳಿದ್ದಾರೆ. ಆದರೆ ಯಾವಾಗ ಬರುತ್ತಾರೆ ಎಂಬುದೇ ಪ್ರಶ್ನೆಯಾಗಿದೆ ಎಂದು ಕಮಲನಾಥ್ ಹೇಳಿದ್ದಾರೆ.
ಬಿಜೆಪಿಯ ಅನೈತಿಕ, ಕಾನೂನು ಬಾಹಿರ ಕೃತ್ಯದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಈಗ ಅಪಾಯ ಎದುರಾಗಿದೆ. ಪಾರದರ್ಶಕ ಪ್ರಜಾಪ್ರಭುತ್ವ ಪ್ರಕ್ರಿಯೆ ನೆಲೆ ಕಳೆದುಕೊಂಡಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ನಡೆಸಿರುವ ಲಜ್ಜೆಗೆಟ್ಟ ಕೃತ್ಯದ ಬಗ್ಗೆ ತನಿಖೆ ನಡೆಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿಗಳ ಹೆಸರನ್ನು ಬಹಿರಂಗಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು . ಬಿಜೆಪಿಯು ಬೆಂಗಳೂರಿನ ಹೋಟೆಲ್‌ನಲ್ಲಿ ಬಂಧಿಸಿಟ್ಟಿರುವ ಕಾಂಗ್ರೆಸ್ ಶಾಸಕರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿರುವುದಾಗಿ ಕಮಲನಾಥ್ ಹೇಳಿದ್ದಾರೆ.
ಈ ಮಧ್ಯೆ, ತಮ್ಮನ್ನು ಖುದ್ದಾಗಿ ಭೇಟಿಯಾಗಿ ರಾಜೀನಾಮೆಗೆ ಕಾರಣ ತಿಳಿಸುವಂತೆ ಶಾಸಕರಿಗೆ ವಿಧಾನಸಭೆ ಸ್ಪೀಕರ್ ಎನ್‌ಪಿ ಪ್ರಜಾಪತಿ ಸೂಚಿಸಿದ್ದಾರೆ.







