ಅತ್ಯಾಚಾರ ಆರೋಪಿಗಳಾದ ಬಿಜೆಪಿಯ ಚಿನ್ಮಯಾನಂದ, ಸೇಂಗರ್ ಫೋಟೊಗಳಿರುವ ಪೋಸ್ಟರ್ ಹಾಕಿದ ಎಸ್ಪಿ ನಾಯಕ
ಆದಿತ್ಯನಾಥ್ ಸರಕಾರಕ್ಕೆ ತಿರುಗೇಟು

ಲಕ್ನೋ: ಉತ್ತರ ಪ್ರದೇಶದ ಲಕ್ನೋ ಜಿಲ್ಲಾಡಳಿತವು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಹಲವು ಮಂದಿಯ ಹೆಸರು ಭಾವಚಿತ್ರಗಳಿರುವ ಪೋಸ್ಟರುಗಳನ್ನು ಹಾಕಿರುವುದು ಭಾರೀ ವಿವಾದ ಸೃಷ್ಟಿಸಿತ್ತು. ಇದೀಗ ಸಮಾಜವಾದಿ ಪಕ್ಷವು ಮಾಜಿ ಕೇಂದ್ರ ಸಚಿವ ಬಿಜೆಪಿಯ ಚಿನ್ಮಯಾನಂದ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ, ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇಂಗರ್ ಚಿತ್ರಗಳಿರುವ ಪೋಸ್ಟರುಗಳನ್ನು ಲಕ್ನೋದಲ್ಲಿ ಹಾಕಿದೆ.
"ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳ ನಂತರವೂ ಆದಿತ್ಯನಾಥ್ ಸರಕಾರ ತಾನು ಹಾಕಿದ ಬ್ಯಾನರುಗಳನ್ನು ತೆಗೆಯುವುದಿಲ್ಲವೆಂದಾದರೆ ನಾನು ಕೆಲ ಅಪರಾಧಿಗಳ ಕುರಿತಾದ ಹೋರ್ಡಿಂಗ್ ಗಳನ್ನು ಹಾಕಿದ್ದೇನೆ. ನಮ್ಮ ಪುತ್ರಿಯರು ಅವರ ಬಗ್ಗೆ ಅರಿಯಬೇಕು'' ಎಂದು ಸಮಾಜವಾದಿ ಪಕ್ಷದ ನಾಯಕ ಐಪಿ ಸಿಂಗ್ ಟ್ವೀಟ್ ಮಾಡಿದ್ದಾರೆ.
"ಈ ಹೋರ್ಡಿಂಗ್‍ಗಳನ್ನು ವಿರೋಧಿಸುವವರನ್ನು ಅತ್ಯಾಚಾರಿಗಳ ಬೆಂಬಲಿಗರು ಹಾಗೂ ಮಹಿಳಾ ವಿರೋಧಿಗಳು ಎಂದು ಪರಿಗಣಿಸಬೇಕಾಗುತ್ತದೆ. ನ್ಯಾಯಾಂಗ ನಿಂದನೆಗೈಯ್ಯುವ ಹಾಗೂ ಸಂವಿಧಾನವನ್ನು ಗೌರವಿಸದೇ ಇರುವ ಬಿಜೆಪಿ ಮೊದಲು ಆತ್ಮಾವಲೋಕನ ನಡೆಸಬೇಕು, ಬಿಜೆಪಿ ಮಹಿಳಾ ವಿರೋಧಿಯಾಗಿದೆ'' ಎಂದು ಅವರು ಹೇಳಿದ್ದಾರೆ.
ಚಿನ್ಮಯಾನಂದ ಹಾಗೂ ಸೇಂಗರ್ ಭಾವಚಿತ್ರಗಳು ಮತ್ತು ಮಾಹಿತಿಯ ಜತೆಗೆ "ಬೇಟಿಯಾ ರಹೇ ಸಾವಧಾನ್, ಸುರಕ್ಷಿತ್ ರಹೇ ಹಿಂದುಸ್ತಾನ್" ಎಂಬ ಘೋಷಣೆಯನ್ನೂ ಹಾಕಲಾಗಿದೆ.
ಆದರೆ ಲಕ್ನೋ ಜಿಲ್ಲಾಡಳಿತ ಈ ಬ್ಯಾನರುಗಳನ್ನು ತೆಗೆದು ಹಾಕಿದೆ.







