ಕೊರೋನ ವೈರಸ್: ಸಹಾಯವಾಣಿಗೆ ಮಾಹಿತಿ ನೀಡಲು ತುಮಕೂರು ಜಿಲ್ಲಾಧಿಕಾರಿ ಮನವಿ
ತುಮಕೂರು, ಮಾ.13: ಕೊರೋನ ವೈರಸ್ ರಾಜ್ಯದಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿನ ನಾಗರಿಕರು ಯಾರಾದರೂ ಕಳೆದ 14 ದಿನಗಳಲ್ಲಿ ವಿದೇಶ ಪ್ರಯಾಣ ಮಾಡಿದ್ದಲ್ಲಿ ಸಹಾಯವಾಣಿ ಸಂಖ್ಯೆ-0816-2278387, 2251414 ಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಸಹಾಯವಾಣಿ ಸಂಖ್ಯೆಯು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್‍ಗಳನ್ನು ಮೀಸಲಿಡಲಾಗಿದೆ ಮತ್ತು ಅಗತ್ಯ ಔಷಧಿಗಳು ಹಾಗೂ ಸಲಕರಣೆಗಳನ್ನು ಆರೋಗ್ಯ ಸಂಸ್ಥೆಗಳಲ್ಲಿ ದಾಸ್ತಾನು ಮಾಡಲಾಗಿದೆ. ಆರೋಗ್ಯವಂತ ವ್ಯಕ್ತಿಗಳು ಮಾಸ್ಕ್ ಗಳನ್ನು ಬಳಸಬೇಕಾಗಿಲ್ಲ ಮತ್ತು ಅನಾವಶ್ಯಕವಾಗಿ ಉಪಯೋಗಿಸುವ ಮಾಸ್ಕ್ ಗಳಿಂದ ಉಪಯುಕ್ತಕ್ಕಿಂತ ತೊಂದರೆಗಳು ಹೆಚ್ಚು ಇರುವುದರಿಂದ, ಸಂಶಯಾಸ್ಪದ ಕೋವಿಡ್–19 ಸೋಂಕಿತರು ಅವರನ್ನು ಆರೈಕೆ ಮಾಡುವವರು ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೈದ್ಯರು ಮತ್ತು ಸಿಬ್ಬಂದಿಗಳು ಮಾತ್ರ ಮಾಸ್ಕ್ ಗಳನ್ನು ಬಳಸಬೇಕೆಂದು ಅವರು ಸಲಹೆ ನೀಡಿದ್ದಾರೆ.
ಮುಂಜಾಗ್ರತಾ ಕ್ರಮಗಳು: ಕೋವಿಡ್ 19 ರೋಗದಿಂದ ಮುಕ್ತರಾಗಲು ಪದೇ ಪದೇ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳುವುದು, ದೇಹದ, ಕೈಗಳ ಸ್ವಚ್ಚತೆ ಕಾಪಾಡುವುದು, ಪ್ರತಿ ಮಾಸ್ಕ್ ಗಳನ್ನು 6-8 ಗಂಟೆಗಳು ಮಾತ್ರ ಬಳಸಬಹುದಾಗಿದೆ. ಎಲ್ಲೆಂದರಲ್ಲಿ ಉಗುಳುವುದು ಮಾಡಬಾರದು, ಸೀನು, ಕೆಮ್ಮುವಾಗ ಟಿಶ್ಯೂ/ಕರವಸ್ತ್ರ ಬಳಸಿ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು, ಅನಾವಶ್ಯಕ ಪ್ರಯಾಣ ಬೆಳೆಸುವುದನ್ನು ನಿಲ್ಲಿಸುವುದು, ಜಾತ್ರೆ, ಸಭಾ-ಸಮಾರಂಭಗಳಿಗೆ ಹೋಗುವ ಮುನ್ನ ಈ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಸೂಕ್ತ ಎಂದು ಮನವಿ ಮಾಡಿದ್ದಾರೆ.







