ಡಾ.ಮೋಹನ್ ಆಳ್ವಗೆ ‘ಮುದ್ರಾಡಿ ನಾಟ್ಕ ಸಂಮಾನ’ ಪ್ರಶಸ್ತಿ ಪ್ರದಾನ

ಹೆಬ್ರಿ, ಮಾ.13: ಜೀವನದ ಬಹುಮುಖ್ಯ ಅಂಗವೇ ಕಲಾ ಜಗತ್ತು. ಕಲೆ ಇಲ್ಲದೆ ಜಗತ್ತೇ ಇಲ್ಲ. ಕಲೆ ಸಂಸ್ಕೃತಿಗಾಗಿ ಜೀವನವನ್ನು ಮುಡುಪಿಡುವುದು ಧನ್ಯತೆಯನ್ನು ನೀಡುತ್ತದೆ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಎಂ.ಮೋಹನ್ ಆಳ್ವ ಹೇಳಿದ್ದಾರೆ.
ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆಯ ವತಿಯಿಂದ ನಾಟ್ಕದೂರಿನ ಆರೂರು ಕೃಷ್ಣಮೂರ್ತಿ ರಾವ್ ಬಯಲು ರಂಗ ಮಂದಿರದಲ್ಲಿ ಆರು ದಿನಗಳ ಕಾಲ ನಡೆದ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ-10ರ ಸಮಾರೋಪ ಸಮಾರಂಭದಲ್ಲಿ ‘ಮುದ್ರಾಡಿ ನಾಟ್ಕ ಸಂಮಾನ- 2020’ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವಿೀಕರಿಸಿ ಅವರು ಮಾತನಾಡುತಿದ್ದರು.
ಯಾರಿಗೆ ಸೌಂದರ್ಯ ಪ್ರಜ್ಞೆ ಇಲ್ಲವೋ ಅವರು ಮನುಷ್ಯರೇ ಅಲ್ಲ. ಕಲೆ, ಸಾಹಿತ್ಯ, ಬದುಕು, ದೇಶದ ಬಗ್ಗೆ ಅಭಿಮಾನ ಇರುವವರಿಗೆ ಸೌಂದರ್ಯ ಪ್ರಜ್ಞೆ ಇರುತ್ತದೆ. ಇವು ಇಲ್ಲದಿದ್ದರೇ ಅವರು ದೇಶಕ್ಕೆ ದೊಡ್ಡ ಅಪಾಯಕಾರಿ ವ್ಯಕ್ತಿಯಾಗುತ್ತಾರೆ ಎಂದು ಡಾ.ಮೋಹನ ಆಳ್ವ ಅಭಿಪ್ರಾಯ ಪಟ್ಟಿ ದ್ದಾರೆ. ಆಳ್ವ ಅವರು ಪ್ರಶಸ್ತಿಯೊಂದಿಗೆ ದೊರೆತ 25 ಸಾವಿರ ರೂ.ನಗದಿಗೆ ಇನ್ನೂ 40 ಸಾವಿರ ರೂ. ಸೇರಿಸಿ ನವು ತುಳುವೆರ್ ಸಂಸ್ಥೆಗೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ ಈ ಮೊದಲು ರಾಜ್ಯದ ಅಕಾಡೆಮಿಗಳು ಅವಧಿ ಪೂರ್ಣಗೊಳಿಸುವ ಪರಿಪಾಠವಿತ್ತು. ಈಗ ಸರಕಾರ ಬದಲಾದ ಕೂಡಲೇ ಅಕಾಡೆಮಿಗಳನ್ನು ವಿಸರ್ಜಿಸುವ ಕೆಟ್ಟು ಸ್ಥಿತಿ ನಮ್ಮ ಮುಂದಿದೆ. ಹಿಂದಿನ ಸರಕಾರ ಕಲಾವಿದರಿಗೆ ಘೋಷಿಸಿದ ಪ್ರಶಸ್ತಿಗಳನ್ನು ಹೊಸ ಸರಕಾರ ರದ್ದುಗೊಳಿಸುವುದು ಸರಕಾರವೊಂದು ಕಲಾವಿದರಿಗೆ ಮಾಡುವ ಅವಮಾನ ವಾಗಿದೆ. ಯಾರೂ ಕೂಡ ಇದಕ್ಕೆ ಪ್ರತಿರೋಧ ವ್ಯಕ್ತ ಪಡಿಸದಿರುವುದು, ಧ್ವನಿ ಎತ್ತದಿರುವುದು ದುಖ:ದ ಸಂಗತಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮುದ್ರಾಡಿ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಮೋಹನ್ ಸ್ವಾಮೀಜಿ ಆರ್ಶೀವಚನ ನೀಡಿದರು. ಕಲಾ ಪೋಷಕರಾದ ಉದ್ಯಮಿ ತುಮಕೂರು ಪ್ರಸಾದ್, ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ರಂಗ ನಿರ್ದೇಶಕ ಸುಕುಮಾರ್‌ಮೋಹನ್, ವಾಣಿ ಸುಕುಮಾರ್, ಸುಗಂಧಿ ಉಮೇಶ್ ಕಲ್ಮಾಡಿ, ಸುಧೀಂದ್ರ ಮೋಹನ್, ಉಮೇಶ್ ಕಲ್ಮಾಡಿ, ಕರುಣಾಕರ ಶಿವಪುರ ಮತ್ತಿತರರು ಉಪಸ್ಥಿತರಿದ್ದರು.
ರಂಗನಿರ್ದೇಶಕ ಬೆಂಗಳೂರಿನ ಜಗದೀಶ ಜಾಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಾಡಿನ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಮತ್ತು ಆಳ್ವಾಸ್ ವಿದ್ಯಾ ಸಂಸ್ಥೆಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮನಮೋಹಕ ನೃತ್ಯ ವೈವಿಧ್ಯ ಪ್ರದರ್ಶನ ನಡೆದವು.







