ಮಾಲ್, ಥಿಯೇಟರ್, ಮದುವೆ ಹಾಲ್ ಬಂದ್ ಮಾಡಿಸುವ ಸರಕಾರದ ಕ್ರಮ ಮೂರ್ಖತನದ್ದು: ಡಾ.ಶ್ರೀನಿವಾಸ ಕಕ್ಕಿಲ್ಲಾಯ
ಕೊರೋನ ವೈರಸ್ ಭೀತಿ ಹಿನ್ನೆಲೆ
ಬೆಂಗಳೂರು, ಮಾ.13: ಕೊರೋನ ವೈರಸ್ ಭೀತಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರಕಾರ ಮಾಲ್ ಗಳು, ಥಿಯೇಟರ್ ಗಳು, ಸಭೆ ಸಮಾರಂಭಗಳನ್ನು ನಿರ್ಬಂಧಿಸಿದ ಬಗ್ಗೆ ಖ್ಯಾತ ವೈದ್ಯ, ಪ್ರಗತಿಪರ ಚಿಂತಕ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಪ್ರತಿಕ್ರಿಯಿಸಿದ್ದು, 'ಈ ಸರಕಾರಕ್ಕೆ ಯಾರಾದರೂ ಬುದ್ಧಿ ಹೇಳಿ ಅಥವಾ ಆ ಮಾಲ್, ಸಿನಿಮಾ ಮಾಲಕರು, ಮದುವೆ ಏರ್ಪಡಿಸಿದವರು ಬೀದಿಗೆ ಬಂದು ಪ್ರತಿಭಟಿಸಿ. ಇದು ಯಾವ ಉಪಯೋಗಕ್ಕೂ ಇಲ್ಲದ ಮೂರ್ಖತನದ ನಿರ್ಧಾರ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತನ್ನ ಫೇಸ್ಬುಕ್ ಖಾತೆಯಲ್ಲಿ ಬರೆದಿರುವ ಅವರು, 'ಕೊರೊನಾ ಹರಡಿಯಾಗಿದೆ, ಭಾರತಕ್ಕೆ ಬಂದಾಗಿದೆ, ಶತಮಾನಗಳ ಕಾಲ ಉಳಿಯಲಿದೆ, ಅದು ಹರಡುವುದನ್ನು ತಡೆಯಲು ಸಾಧ್ಯವಿಲ್ಲ. ಶೇ.70 ಸೋಂಕಿತರಲ್ಲಿ, ಅದರಲ್ಲೂ ಮಕ್ಕಳು ಮತ್ತು ಕಿರಿವಯಸ್ಕರಲ್ಲಿ ಯಾವ ರೋಗಲಕ್ಷಣಗಳೂ ಇಲ್ಲದೆ, ಅಥವಾ ಅತ್ಯಲ್ಪ ನೆಗಡಿ ಕೆಮ್ಮು ಉಂಟಾಗಿ ಅದು ಹೋಗಿಬಿಡುತ್ತದೆ. 60ಕ್ಕೆ ಮೇಲ್ಪಟ್ಟವರಲ್ಲಿ, ಒಟ್ಟಾರೆಯಾಗಿ ಶೇ. 15ರಷ್ಟು ಸೋಂಕಿತರಲ್ಲಿ, ಶ್ವಾಸಾಂಗಕ್ಕೆ ಸಮಸ್ಯೆಯುಂಟಾಗಿ ಉಸಿರಾಡಲು ಕಷ್ಟವೆನಿಸಬಹುದು, ಅಂತವರಷ್ಟೇ ಆಸ್ಪತ್ರೆಗೆ ಬಂದರೆ ಸಾಕು. ಅವರಲ್ಲೂ ಹೆಚ್ಚಿನವರಿಗೆ ಕೇವಲ ಆಮ್ಲಜನಕ ಕೊಟ್ಟರೆ ಸಾಕಾಗುತ್ತದೆ, ಶೇ. 5ರಷ್ಟು ಸೋಂಕಿತರಿಗಷ್ಟೇ ಕೃತಕ ಉಸಿರಾಟದ ಅಗತ್ಯ ಬರಬಹುದು, ಅವರಲ್ಲೂ ಹಲವರು ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದಾರೆ.
'ಮಾಲ್, ಮದುವೆ ಹಾಲ್ ಮುಚ್ಚಬೇಡಿ. ಈ ಹಿರಿವಯಸ್ಕರು, ಅದಾಗಲೇ ಶ್ವಾಸಾಂಗದ ಸಮಸ್ಯೆಯುಳ್ಳವರು ಅತ್ತ ಹೋಗದಂತೆ ಹೇಳಿ, ಸಾಕು. ಉಸಿರಾಟದ ಸಮಸ್ಯೆಯಾದವರು ಕೂಡಲೇ ಆಸ್ಪತ್ರೆಗೆ ಹೋಗಿ. ತೀವ್ರ ಉಸಿರಾಟದ ಸಮಸ್ಯೆಯಿದ್ದವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಿ, ಸಾಕು. ಮೂಗಿನ ತುದಿಗೆ ನೆಗಡಿಯಾದದ್ದಕ್ಕೆ ಕತ್ತನ್ನೇ ಕತ್ತರಿಸಬೇಡಿ ಎಂದು ಸರಕಾರದ ಕ್ರಮವನ್ನು ಖಂಡಿಸಿದ್ದಾರೆ.