ಕುನಾಲ್ ಕಾಮ್ರಾ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಿದ ಏರ್ ವಿಸ್ತಾರ

ಹೊಸದಿಲ್ಲಿ, ಮಾ.13: ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಸಹಪ್ರಯಾಣಿಕನಾಗಿದ್ದ ಪತ್ರಕರ್ತ ಅರ್ನಬ್ ಗೋಸ್ವಾಮಿ ಜತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ, 2 ತಿಂಗಳ ಬಳಿಕ “ಏರ್ ವಿಸ್ತಾರ ವಿಮಾನಯಾನ ಸಂಸ್ಥೆ ಕುನಾಲ್ ಕಾಮ್ರಾಗೆ ವಿಮಾನ ಪ್ರಯಾಣಕ್ಕೆ ನಿಷೇಧ ವಿಧಿಸಿದೆ. ಏರ್ ವಿಸ್ತಾರ ಸಂಸ್ಥೆ ಎಪ್ರಿಲ್ 27ರವರೆಗೆ ನನಗೆ ಪ್ರಯಾಣ ನಿಷೇಧ ವಿಧಿಸಿದೆ. ನನ್ನ ಕೃತ್ಯದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ ಅಥವಾ ನನಗೆ ಯಾವುದೇ ಅಚ್ಚರಿಯಾಗಿಲ್ಲ. ಇಂತಹ ನಿಷೇಧದಿಂದ ನನಗೆ ಯಾವುದೇ ತೊಂದರೆಯೂ ಆಗಿಲ್ಲ” ಎಂದು ಕಾಮ್ರಾ ಹೇಳಿದ್ದಾರೆ.
ಜನವರಿ 28ರಂದು ಮುಂಬೈಯಿಂದ ಲಕ್ನೊಗೆ ಪ್ರಯಾಣಿಸುವ ಇಂಡಿಗೊ ವಿಮಾನದಲ್ಲಿ ಈ ಘಟನೆ ನಡೆದಿತ್ತು. ಸಹಪ್ರಯಾಣಿಕನಾಗಿದ್ದ ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ‘ನೀವೊಬ್ಬ ಹೇಡಿಯೇ ಅಥವಾ ಪತ್ರಕರ್ತನೇ’ ಎಂದು ಕುನಾಲ್ ಕಾಮ್ರಾ ಪದೇ ಪದೇ ಪ್ರಶ್ನಿಸಿದರು. ಈ ಬಗ್ಗೆ ಯಾರೂ ದೂರು ನೀಡಿರಲಿಲ್ಲ. ಆದರೆ ಘಟನೆಯ ವೀಡಿಯೊ ದೃಶ್ಯವನ್ನು ಸ್ವತಃ ಕಾಮ್ರಾ ಟ್ವೀಟ್ ಮಾಡಿದ್ದರು. ಈ ವೀಡಿಯೊ ವೈರಲ್ ಆಗುತ್ತಿರುವಂತೆಯೇ ಕಾಮ್ರಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಇಂಡಿಗೊ ಸಂಸ್ಥೆ ಕುನಾಲ್ ಕಾಮ್ರಾಗೆ ಆರು ತಿಂಗಳ ವಿಮಾನಪ್ರಯಾಣ ನಿಷೇಧ ವಿಧಿಸಿದ್ದರೆ (ಬಳಿಕ 3 ತಿಂಗಳಿಗೆ ಸೀಮಿತಗೊಳಿಸಲಾಗಿದೆ), ಏರ್ ಇಂಡಿಯಾ, ಸ್ಪೈಸ್‌ಜೆಟ್ ಮತ್ತು ಗೋಏರ್ ಸಂಸ್ಥೆಗಳು ಅನಿರ್ಧಿಷ್ಟಾವಧಿ ನಿಷೇಧ ಹೇರಿದ್ದವು.
ನಿಷೇಧವನ್ನು ಪ್ರಶ್ನಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದ ಕಾಮ್ರಾ, ನಿಯಮ ಪ್ರಕಾರ ಅಶಿಸ್ತಿನ ಪ್ರಯಾಣಿಕರ ಬಗ್ಗೆ ವಿಮಾನದ ಪೈಲಟ್ ದೂರು ನೀಡಬೇಕು. ಆದರೆ ಈ ಪ್ರಕರಣದಲ್ಲಿ ಪೈಲಟ್ ದೂರು ನೀಡಿಲ್ಲವಾದ್ದರಿಂದ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಬರುವುದಿಲ್ಲ ಎಂದು ವಾದಿಸಿದ್ದರು.







