ಕೊರೋನವೈರಸನ್ನು ವುಹಾನ್‌ಗೆ ತಂದು ಬಿಟ್ಟಿದ್ದು ಅಮೆರಿಕ: ಚೀನಾ ಆರೋಪ

ಬೀಜಿಂಗ್, ಮಾ. 13: ಜಗತ್ತಿನಾದ್ಯಂತ ಹಾಹಾಕಾರ ಎಬ್ಬಿಸಿರುವ ನೂತನ-ಕೊರೋನವೈರಸನ್ನು ಚೀನಾದ ವುಹಾನ್ ನಗರಕ್ಕೆ ತಂದು ಬಿಟ್ಟಿರುವುದು ಅಮೆರಿಕ ಸೇನೆ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಗುರುವಾರ ಹೇಳಿದ್ದಾರೆ.
ಕೊರೋನವೈರಸ್ ವುಹಾನ್‌ನಲ್ಲಿ ಹುಟ್ಟಿಕೊಂಡಿರುವ ವೈರಸ್ ಎನ್ನುವುದು ಜನಜನಿತವಾಗಿರುವಂತೆಯೇ, ಅದನ್ನು ಅಲ್ಲಗಳೆಯಲು ಚೀನಾ ಪ್ರಯತ್ನಿಸುತ್ತಿದೆ. ಕೊರೋನವೈರಸ್ ಚೀನಾದಲ್ಲಿ ಹುಟ್ಟಿಕೊಂಡಿದ್ದಲ್ಲ, ಆದರೆ ಅದರ ಹರಡುವಿಕೆಯನ್ನು ತಡೆಯಲು ಚೀನಾ ಅಭೂತಪೂರ್ವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಸಂದೇಶವೊಂದನ್ನು ಪ್ರಸಾರಿಸಲು ಚೀನಾ ಈಗ ಮುಂದಾಗಿದೆ.
‘‘ಅಮೆರಿಕ ಸೇನೆಯು ಸಾಂಕ್ರಾಮಿಕ ರೋಗಾಣುಗಳನ್ನು ವುಹಾನ್‌ಗೆ ತಂದು ಬಿಟ್ಟಿರುವ ಸಾಧ್ಯತೆಯಿದೆ’’ ಎಂದು ಝಾವೊ ಲಿಜಿಯನ್ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಆದರೆ, ಅದಕ್ಕೆ ಯಾವುದೇ ಪುರಾವೆಯನ್ನು ಅವರು ನೀಡಿಲ್ಲ.
ಅದೇ ವೇಳೆ, ಚೀನಾವು ಕೊರೋನವೈರಸ್ ನಿಭಾಯಿಸಿದ ರೀತಿಯಿಂದಾಗಿ ಜನರಲ್ಲಿ ಉಂಟಾಗಿರುವ ಅತೃಪ್ತಿಯಿಂದ ಅವರ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿಯ ಪಿತೂರಿ ಸಿದ್ಧಾಂತಗಳನ್ನು ಹರಿಯಬಿಡಲಾಗುತ್ತಿದೆ ಎಂದು ಶಿಕಾಗೊ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ವಿಜ್ಞಾನದ ಪ್ರೊಫೆಸರ್ ಡಾಲಿ ಯಂಗ್ ಹೇಳುತ್ತಾರೆ.







