ಕೊರೋನ ಭೀತಿ: 'ಬಂದ್'ಗೆ ಆದೇಶಿಸಿದ ರಾಜ್ಯ ಸರಕಾರದ ಕ್ರಮದ ಬಗ್ಗೆ ಜನರು ಹೇಳಿದ್ದು ಹೀಗೆ...

ಇದ್ರೀಸ್ ಚೌಧರಿ- ಪೊನ್ನಣ್ಣ- ಜರೀನಾ-ಕ್ಲಿಫ್ಟನ್ ಡಿ.
ಬೆಂಗಳೂರು, ಮಾ.13: ಕೊರೋನ ವೈರಸ್ ಭೀತಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರಕಾರ ಮಾಲ್ ಗಳು, ಥಿಯೇಟರ್ ಗಳು, ಸಭೆ ಸಮಾರಂಭಗಳನ್ನು ನಿರ್ಬಂಧಿಸಿದ ಬಗ್ಗೆ ಹಲವು ಪ್ರತಿಕ್ರಿಯಿಸಿದ್ದಾರೆ.
ಪ್ರತಿಕ್ರಿಯೆಗಳು ಹೀಗಿವೆ....
100 ಕೋಟಿ ರೂ. ನಷ್ಟ: ಕೊರೋನ ಭೀತಿಯಿಂದ ಸಿನೆಮಾ, ಚಿತ್ರಮಂದಿರಗಳು ಶನಿವಾರದಿಂದ ಒಂದು ವಾರ ಕಾಲ ಬಂದ್ ಹಿನ್ನೆಲೆ ಸುಮಾರು 100 ಕೋಟಿ ರೂ. ನಷ್ಟ ಆಗಬಹುದು. ಸಾರ್ವಜನಿಕರ ದೃಷ್ಟಿಯಿಂದ ಸರಕಾರದ ಈ ನಿರ್ಧಾರ ಸ್ವಾಗತಿಸಲಾಗಿದೆ. ಆದರೆ, ಇದರಿಂದ ನಷ್ಟ ಆಗುವುದು ಮತ್ತು ಸಿನೆಮಾ ರಂಗದ ದಿನಗೂಲಿ ಕಾರ್ಮಿಕರಿಗೆ ಅನ್ಯಾಯ ಆಗಲಿದೆ.
-ಉಮೇಶ್ ಬಣಕಾರ್, ಉಪಾಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಹಸಿ ತರಕಾರಿ, ಕಚ್ಚಾ ವಸ್ತುಗಳು ಏನಾಗಬೇಕು?
ರಾಜ್ಯ ಸರಕಾರ ಏಕಾಏಕಿ ಬೃಹತ್ ಮಾಲ್, ಮಳಿಗೆಗಳನ್ನು ಮುಚ್ಚಬೇಕೆಂದು ಆದೇಶ ಹೊರಡಿಸಿದೆ. ಆದರೆ, ಈ ಮಾಲ್ಗಳಲ್ಲಿರುವ ಹಸಿ ತರಕಾರಿ, ಕಚ್ಚಾ ವಸ್ತುಗಳನ್ನು ಏನು ಮಾಡಬೇಕು? ಸರಕಾರವೇ ಜನರನ್ನು ಹೆದರಿಸುವುದು ಸರಿಯಲ್ಲ. ಬದಲಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.
-ಚಂದ್ರಶೇಖರ್, ಕಾರ್ಯದರ್ಶಿ, ಬೆಂಗಳೂರು ಬೃಹತ್ ಮಳಿಗೆಗಳ ಸಂಘ
ದಿನಗೂಲಿ ಯಾರು ಕೊಡುತ್ತಾರೆ?
ರಾಜಧಾನಿ ಬೆಂಗಳೂರಿನಲ್ಲಿಯೇ 5 ಲಕ್ಷಕ್ಕೂ ಅಧಿಕ ದಿನಗೂಲಿ ನೌಕರರು ಇದ್ದಾರೆ. ಅದೇ ರೀತಿ, ರಾಜ್ಯದೆಲ್ಲೆಡೆ ಲಕ್ಷಾಂತರ ಸಂಖ್ಯೆಯಲ್ಲಿ ದಿನಕೂಲಿಕಾರರು ಇದ್ದಾರೆ. ಹೀಗಿರುವಾಗ, ಏಕಾಏಕಿ ಒಂದು ವಾರ ರಜೆ ಘೋಷಣೆ ಮಾಡಿದರೆ, ಈ ಕುಟುಂಬಗಳ ಜೀವನ ಹೇಗೆ ಸಾಗಬೇಕು. ಅದೇ ರೀತಿ, ಬೃಹತ್ ಮಳಿಗೆಗಳು ಬಂದ್ ಆದರೆ, ನೌಕರರ ವೇತನ ಕಡಿತವಾಗುವ ಭೀತಿ ಎದುರಾಗಿದೆ.
-ಎನ್.ರಾಜು ಸಿಂಹ, ಅಸಂಘಟಿಕ ಕಾರ್ಮಿಕರ ಹೋರಾಟಗಾರ
ಐಟಿ-ಬಿಟಿ ಕ್ಷೇತ್ರದ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಿದ್ದಾರೆ. ಆದರೆ, ಗಾರ್ಮೆಂಟ್ಸ್ ಕಾರ್ಮಿಕರನ್ನು, ಅದರಲ್ಲಿಯೂ ಮಹಿಳಾ ಕಾರ್ಮಿಕರಿಗೆ ಇಂತಹ ಸೌಲಭ್ಯ ನೀಡದಿರುವುದು ಸರಿಯಾದ ಕ್ರಮವಲ್ಲ. ಸರಕಾರ ಈ ಕುರಿತು ಗಮನ ನೀಡಬೇಕಿತ್ತು. ಗಾರ್ಮೆಂಟ್ಸ್ಗಳಲ್ಲಿ ಒಂದೇ ಕಡೆ ಸಾವಿರಾರು ಜನ ಕೆಲಸ ಮಾಡುತ್ತಾರೆ. ಅಲ್ಲದೆ, ವಿದೇಶಗಳಿಂದ ಖರೀದಿದಾರರು ಬರುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಗಾರ್ಮೆಂಟ್ಸ್ಗಳಿಗೆ ವಿಶೇಷ ರಜೆ ನೀಡಬೇಕು.
-ಯಶೋಧ, ಗಾರ್ಮೆಂಟ್ಸ್ ಕಾರ್ಮಿಕರ ಸಂಘಟನೆಯ ಅಧ್ಯಕ್ಷೆ
‘ಕೊರೋನ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಒಂದು ವಾರ ರಜೆ ಘೋಷಿಸಿದ್ದರಿಂದ ಪ್ರತಿದಿನ ದುಡಿದು ತಿನ್ನುವ ನಮ್ಮಂತವರಿಗೆ ತುಂಬಾ ತೊಂದರೆಯಾಗಲಿದೆ. ಸರಕಾರ ಇಂತಹ ಸಂದರ್ಭದಲ್ಲಿ ನಮಗೆಲ್ಲ ಪರ್ಯಾಯ ಕೆಲಸವನ್ನು ನೀಡಬೇಕು. ಇದರಿಂದ, ನಮಗೆ ಯಾವುದೇ ಆರ್ಥಿಕ ಸಮಸ್ಯೆ ಉದ್ಭವಿಸುವುದಿಲ್ಲ. ಇಲ್ಲದಿದ್ದರೆ, ತುಂಬಾ ಸಮಸ್ಯೆ ಉದ್ಭವವಾಗುತ್ತದೆ.’
-ಜರೀನಾ, ಕೂಲಿ ಕಾರ್ಮಿಕರು
ಬಂದ್ ಮಾಡುವ ಬದಲು ಶುಚಿತ್ವಕ್ಕೆ ಆದ್ಯತೆ ನೀಡಲಿ
ರಾಜ್ಯ ಸರಕಾರವು ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ಒಂದು ವಾರ ಬಂದ್ಗೆ ಕರೆ ನೀಡುವ ಬದಲು ಶುಚಿತ್ವಕ್ಕೆ ಆದ್ಯತೆ ನೀಡುವುದು ಉತ್ತಮ. ಮಾರುಕಟ್ಟೆಗಳನ್ನು ಬಂದ್ ಮಾಡುವುದರಿಂದ ರೈತರು, ವ್ಯಾಪಾರಿಗಳು ಹಾಗೂ ದಿನಗೂಲಿ ನೌಕರರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಲ್ಲದೇ, ದಿನನಿತ್ಯದ ವಸ್ತುಗಳು ಸಿಗದಂತೆ ಸಾರ್ವಜನಿಕರು ಪರದಾಡುವುದು ತಪ್ಪುವುದಿಲ್ಲ. ಸೊಪ್ಪು, ತರಕಾರಿಗಳನ್ನು ಹೆಚ್ಚಿನ ಸಮಯ ಸಂಗ್ರಹಿಸಿಡಲು ಸಾಧ್ಯವಿಲ್ಲ. ಪ್ರತಿನಿತ್ಯ ರೈತರು ಗ್ರಾಮೀಣ ಪ್ರದೇಶಗಳಿಂದ ತಂದು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ. ನಮ್ಮ ಮಾರುಕಟ್ಟೆಯಲ್ಲಿ 475 ಅಂಗಡಿಗಳಿದ್ದು, ಸುಮಾರು ಎರಡು ಸಾವಿರ ಜನ ಇದನ್ನು ಅವಲಂಬಿಸಿದ್ದಾರೆ. ಈ ಪೈಕಿ ದಿನಗೂಲಿ ನೌಕರರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ
-ಇದ್ರೀಸ್ ಚೌಧರಿ, ರಸೆಲ್ ಮಾರುಕಟ್ಟೆ ವ್ಯಾಪಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ
ಸರಕಾರ ತೀರ್ಮಾನ ಮಾಡಿರುವ ಹಿನ್ನೆಲೆಯಲ್ಲಿ ನಾವು ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ. ಎಲ್ಲ ಕೈಗಾರಿಕೆಗಳನ್ನು ಮುಚ್ಚುವ ಮೂಲಕ ಬೆಂಬಲ ವ್ಯಕ್ತಪಡಿಸಲಾಗುತ್ತದೆ. ಇದರಿಂದ ಇಡೀ ಕೈಗಾರಿಕಾ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಂತು ಸತ್ಯ.
-ಸಿ.ಆರ್.ಜನಾರ್ಧನ್, ಎಫ್ಕೆಸಿಸಿಐ ಅಧ್ಯಕ್ಷ
‘ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಾ.14ರಿಂದ ಒಂದು ವಾರದ ಅವಧಿಗೆ ರಾಜ್ಯಾದ್ಯಂತ ಮಾಲ್ಗಳು, ಚಿತ್ರಮಂದಿರಗಳು, ನೈಟ್ಕ್ಲಬ್ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವುದು ಒಳ್ಳೆಯದೆ. ಆದರೆ, ಸರಕಾರ ಈ ಎಲ್ಲ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಹಾಗೂ ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಊಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.’
-ಕ್ಲಿಫ್ಟನ್ ಡಿ. ರೊಜಾರಿಯೋ, ಹೈಕೋರ್ಟ್ ವಕೀಲ
‘ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಒಂದು ವಾರ ರಜೆ ಘೋಷಿಸಿರುವುದು ಒಳ್ಳೆಯದೆ. ಜತೆಗೆ ರಾಜ್ಯ ಸರಕಾರ ಕೂಲಿ ಕಾರ್ಮಿಕರು ಸೇರಿ ಎಲ್ಲರಿಗೂ ಆಹಾರ, ಆರೋಗ್ಯ ಸೇರಿ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸುವ ವ್ಯವಸ್ಥೆಯಾಗಬೇಕು.’
-ಎ.ಎಸ್.ಪೊನ್ನಣ್ಣ, ಹೈಕೋರ್ಟ್ ಹಿರಿಯ ವಕೀಲ







