ಚಿಟ್ಪಾಡಿಯ ಮಜಲ ಕೆರೆ ಅಭಿವೃದ್ಧಿಗೆ ಸ್ಥಳೀಯರ ಆಗ್ರಹ

ಉಡುಪಿ, ಮಾ.13: ಉಡುಪಿ ನಗರಸಭೆ ವ್ಯಾಪ್ತಿಯ 76 ಬಡಗುಬೆಟ್ಟು ಗ್ರಾಮದಲ್ಲಿರುವ ಪುರಾತನವಾದ ‘ಮಜಲ ಕೆರೆ’ಯ ಬಾಕಿ ಇರುವ ಅಭಿವೃದ್ಧಿ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಆಗ್ರಹಿಸಿದೆ.
ಬಡಗುಬೆಟ್ಟು ಗ್ರಾಮದ ಸರ್ವೆ ನಂ-37/8 ರ ಚಿಟ್ಪಾಡಿಯ ಲೋಕಯ್ಯ ಶೆಟ್ಟಿ ಕಂಪೌಂಡ್ ಬಳಿ 0.38 ಎಕ್ರೆ ಸ್ಥಳದಲ್ಲಿ ಮಜಲ ಕೆರೆ ಆವರಿಸಿಕೊಂಡಿದೆ. ಇಲ್ಲಿ ನೀರು ಸಂಗ್ರಹ ಇರುವುದರಿಂದ ಪರಿಸರದ ಬಾವಿಗಳಲ್ಲಿ ಅಂತರ್ಜಲ ಉಳಿಯುತ್ತಿದೆ. ಈ ಕೆರೆಯನ್ನು 2017ರಲ್ಲಿ ಸರಕಾರಿ ಕೆರೆಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ರೂ. ವೆಚ್ಚದಲ್ಲಿ ಒಂದು ಪಾರ್ಶ್ವದಲ್ಲಿ ಮಾತ್ರ ತಡೆಗೊಡೆ, ಕಂಪೌಂಡು ಕಾಮಗಾರಿ ಮಾಡಲಾಗಿತ್ತು.
ಇನ್ನೊಂದು ಪಾರ್ಶ್ವದಲ್ಲಿ ತಡೆಗೊಡೆ, ಕಂಪೌಂಡು ಕಟ್ಟುವ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇಲ್ಲಿ ಕೆರೆ ಒತ್ತುವರಿ ಆಗಬಹು ದೆಂಬ ಆತಂಕ ಸ್ಥಳೀಯರಾಗಿದ್ದು, ಜಿಲ್ಲಾಡಳಿತವು ಆದಷ್ಟು ಬೇಗ ಮಜಲ ಕೆರೆಯ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಮಾಡಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಒತ್ತಾಯಿಸಿದ್ದಾರೆ.
ಕುಡಿಯಲು ಯೋಗ್ಯವಾಗಿದ್ದ ಮಜಲ ಕೆರೆಯ ನೀರು ಚರಂಡಿಯ ತ್ಯಾಜ್ಯ ನೀರು ಕೆರೆಯನ್ನು ಸೇರುವುದರಿಂದ ಈಗ ನೀರು ಕಲುಷಿತಗೊಂಡಿದೆ. ಕೆರೆಯ ದಂಡೆಯಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಸಾರ್ವಜನಿಕರಿಗೆ, ಜಾನು ವಾರು, ಶಾಲಾ ಮಕ್ಕಳಿಗೆ ಸಂಚಾರಕ್ಕೂ ಅಪಾಯದ ಸ್ಥಿತಿ ಇಲ್ಲಿ ಎದುರಾಗಿದೆ. ಈ ಕೆರೆಯು ಮಳೆಗಾಲದಲ್ಲಿ ತುಂಬಿ, ಇಂದ್ರಾಣಿ ನದಿಗೆ ಹರಿಯುತ್ತದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಸಮಸ್ಯೆ ಪರಿಶೀಲಿಸಿದರೆ ಸತ್ಯಾಂಶವು ತಿಳಿದು ಬರುತ್ತದೆ ಎಂದು ಸ್ಥಳೀಯ ನಾಗರಿಕರು ತಿಳಿಸಿದ್ದಾರೆ.







