ಬಡವರ ಹೊಟ್ಟೆ ಮೇಲೆ ಹೊಡೆಯಬೇಡಿ: ಬೀದಿಬದಿ ವ್ಯಾಪಾರಿಗಳ ಸಂಘದ ವಿನಯ್ ಶ್ರೀನಿವಾಸ್
ಬೆಂಗಳೂರು, ಮಾ. 13: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ, ಏಕಾಏಕಿ ಬೀದಿಬದಿ ವ್ಯಾಪಾರ ಬಂದ್ ಮಾಡಿರುವುದು ಕಾನೂನು ಬಾಹಿರ. ಪ್ರತಿನಿತ್ಯ ದುಡಿದು ತಿನ್ನುವ ಬಡವರ ಹೊಟ್ಟೆ ಮೇಲೆ ಹೊಡೆಯುವುದು ಸರಿಯಲ್ಲ ಎಂದು ಬೀದಿಬದಿ ವ್ಯಾಪಾರಿಗಳ ಸಂಘದ ವಿನಯ್ ಶ್ರೀನಿವಾಸ್ ಆಕ್ಷೇಪಿಸಿದ್ದಾರೆ.
ಶುಕ್ರವಾರ ವಾರ್ತಾಭಾರತಿ ಪ್ರತಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಕೊರೋನ, ಕಾಲರಾ ಸೇರಿದಂತೆ ಇನ್ನಿತರ ರೋಗಗಳು ಬೀದಿಬದಿ ವ್ಯಾಪಾರಿಗಳಿಂದ ಹರಡುತ್ತಿವೆ ಎಂಬ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಸೂಕ್ತ ಮುನ್ನಚ್ಚರಿಕೆ ಕೈಗೊಳ್ಳಲು ನಿರ್ದೇಶನ ನೀಡಬಹುದಿತ್ತು. ಅದು ಬಿಟ್ಟು ಏಕಾಏಕಿ ಅಂಗಡಿಗಳನ್ನು ಬಂದ್ ಮಾಡಿಸಿರುವುದು ಬಡವರಿಗೆ ತೊಂದರೆಯಾಗುತ್ತದೆ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 1.50 ಲಕ್ಷಕ್ಕೂ ಅಧಿಕ ವ್ಯಾಪಾರಿಗಳಿದ್ದು, ಕೋಟ್ಯಂತರ ರೂ.ವಹಿವಾಟು ನಡೆಯುತ್ತದೆ. ಕೂಲಿ ಕಾರ್ಮಿಕರು, ರಿಕ್ಷಾ, ಕ್ಯಾಬ್ ಸೇರಿ ಬಡವರು ಬೀದಿ ಬದಿ ವ್ಯಾಪಾರಿಗಳನ್ನೇ ಆಶ್ರಯಿಸಿದ್ದಾರೆ. ಹೀಗಾಗಿ ಬೀದಿ ವ್ಯಾಪಾರಿಗಳು ಸೇರಿ ಬಡವರು ಎಲ್ಲಿಗೆ ಹೋಗಬೇಕು ಎಂದು ವಿನಯ್ ಶ್ರೀನಿವಾಸ್ ಪ್ರಶ್ನಿಸಿದರು.
ಕೊರೋನ, ಕಾಲರಾ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳ ತಡೆಗೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡುತ್ತಾರೆ. ಆದರೆ, ಸರಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ, ಏಕಾಏಕಿ ಎಲ್ಲವನ್ನೂ ಬಂದ್ ಮಾಡುವ ಅಗತ್ಯವಿರಲಿಲ್ಲ ಎಂದು ಹೇಳಿದರು.







