‘ಯಶವಂತ ಬೋಳೂರ್ 65’ ಕೃತಿ ಬಿಡುಗಡೆ
ಮಂಗಳೂರು, ಮಾ.13: ಲೇಖಕ ರತ್ನಕುಮಾರ್ ಎಂ. ಅವರು ಬರೆದ ಖ್ಯಾತ ಕವಿ, ಕತೆಗಾರ, ಸಾಹಿತಿ ಯಶವಂತ ಬೋಳೂರ್ ಅವರ ಸ್ವಪರಿಚಯದ ‘ಯಶವಂತ ಬೋಳೂರ್ 65’ ಎಂಬ ಕೃತಿ ಬಿಡುಗಡೆ ಸಮಾರಂಭವು ಮೊಗವೀರ ಹೆಲ್ಪ್‌ಲೈನ್ ಪರವಾಗಿ ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆಯಿತು.
ಕೃತಿ ಬಿಡುಗಡೆಗೊಳಿಸಿದ ಮಂಗಳೂರು ಆಕಾಶವಾಣಿಯ ನಿವೃತ್ತ ಅಧಿಕಾರಿ ಡಾ ವಸಂತ ಕುಮಾರ್ ಪೆರ್ಲ ಮಾತನಾಡಿ, ಈ ಕೃತಿಯು ಯಶವಂತ ಬೋಳೂರ್ ಅವರ ಬಗೆಗಿನ ಲೇಖನ, ಗಣ್ಯರ ಅಭಿಪ್ರಾಯ, ಅವರ ಜೀವನದ ಪ್ರಮುಖ ಘಟ್ಟಗಳ ಚಿತ್ರ ಸಂಪುಟವನ್ನು ಹೊಂದಿದೆ. ಜೊತೆಗೆ ಬೋಳೂರ್ ಅವರ ಪೂರ್ಣ ಪರಿಚಯವನ್ನು ಈ ಕೃತಿ ಮಾಡಿಸುತ್ತದೆ ಎಂದರು.
ಯಶವಂತ ಬೋಳೂರ್ ಅವರದ್ದು ತುಸು ಸಂಕೋಚದ ವ್ಯಕ್ತಿತ್ವ. ಇದೇ ಕಾರಣಕ್ಕೆ ಹೆಚ್ಚು ಮುನ್ನೆಲೆಗೆ ಬಂದವರಲ್ಲ. ಪ್ರಚಾರದ ಅಳತೆ ಗೋಲಿನಿಂದ ಯಾರ ಸಾಧನೆಯನ್ನು ಅಳೆಯಲು ಸಾಧ್ಯವಿಲ್ಲ. ಕಥೆಗಾರ, ಕವಿ, ನಾಟಕಕಾರ, ಸಂಘಟಕ, ನಿರೂಪಕನಾಗಿ ವಿವಿಧ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹರಿತ, ಕಡಿಮೆ ಶಬ್ಧಗಳಲ್ಲಿ ಗುರಿ ತಲುಪಿಸುವ ಪರಿಣಾಮಕಾರಿ ಬರವಣಿಗೆ ಅವರಲ್ಲಿತ್ತು. ಇವರು ಎಲೆಮರೆಯ ಸಾಧಕರಾಗಿದ್ದು, ಸದ್ದಿಲ್ಲದೆ ಸಾಧನೆ ಮಾಡಿದವರು ಎಂದು ತಿಳಿಸಿದರು.
ರಾಮಚಂದ್ರ ಬೈಕಂಪಾಡಿ ಅವರು ಶುಭಾಶಂಸನೆಗೈದು, ಯಶವಂತ ಬೋಳೂರ್ ಅವರು ಸಾಮಾಜಿಕ ಕಾರ್ಯಕರ್ತರಾಗಿ ರೂಪುಗೊಂಡ ವರು. ಯಶವಂತ ಬೋಳೂರ್-65 ಕೃತಿಯಲ್ಲಿ 16 ಮಂದಿ ಲೇಖಕರು ಹಿನ್ನೆಲೆ ಲೇಖನವನ್ನು ಬರೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮೊಗವೀರ ಹೆಲ್ಪ್‌ಲೈನ್ ಬಳಗದ ಶಿರೀಶ್ ಕುಮಾರ್ ಮತ್ತು ಅನೂಪ್ ಕಾಂಚನ್ ಇದ್ದರು.







