ಇಟಲಿ ನಮ್ಮ ಕೈಬಿಟ್ಟಿದೆ: ಕೊರೋನವೈರಸ್‌ನಿಂದ ಮೃತಪಟ್ಟ ಮಹಿಳೆಯ ಸಹೋದರನಿಂದ ಆರೋಪ

ನೇಪಲ್ಸ್ (ಇಟಲಿ), ಮಾ. 13: ಕೊರೋನವೈರಸ್‌ನಿಂದಾಗಿ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹವನ್ನು ಕೊಂಡೊಯ್ಯಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಇಟಲಿಯ ಮಹಿಳೆಯ ಸಹೋದರ ಆರೋಪಿಸಿದ್ದಾರೆ. ಈ ಸಂಬಂಧ ಫೇಸ್‌ಬುಕ್‌ನಲ್ಲಿ ಹಾಕಿದ ವೀಡಿಯೊವೊಂದರಲ್ಲಿ ಅವರು ಇಟಲಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆ ಬಳಿಕವೇ ಅಧಿಕಾರಿಗಳು ಬಂದು ಶವವನ್ನು ನೇರವಾಗಿ ಸ್ಮಶಾನಕ್ಕೆ ಸಾಗಿಸಿದ್ದರೆ.
47 ವರ್ಷದ ತೆರೇಸಾ ಫ್ರಾಂಝೀಸ್ ಇಟಲಿಯ ದಕ್ಷಿಣದ ನಗರ ನೇಪಲ್ಸ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಅವರಲ್ಲಿ ಕಳೆದ ವಾರ ಕೊರೋನವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದವು. ಅವರ ಆರೋಗ್ಯ ಕ್ಷಿಪ್ರವಾಗಿ ಕ್ಷೀಣಿಸಿತು ಹಾಗೂ ಅವರು ಶನಿವಾರ ಮೃತಪಟ್ಟರು.
ಅನಿಶ್ಚಿತತೆಯ ಹಿನ್ನೆಲೆಯಲ್ಲಿ, ಮಹಿಳೆಯ ಶವವನ್ನು ಪಡೆಯಲು ಅಧಿಕಾರಿಗಳು ಹಾಗೂ ಸ್ಥಳೀಯ ಆಸ್ಪತ್ರೆಗಳು ನಿರಾಕರಿಸಿವೆ.
‘‘ನನ್ನ ಸಹೋದರಿ ಸತ್ತು ಹಾಸಿಗೆಯಲ್ಲಿ ಮಲಗಿದ್ದಾರೆ. ಏನು ಮಾಡಬೇಕೆಂದು ನನಗೆ ಗೊತ್ತಿಲ್ಲ. ಅವರಿಗೆ ತಕ್ಕುದಾದ ಅಂತ್ಯಸಂಸ್ಕಾರವನ್ನು ನೀಡಲು ನನಗೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಸರಕಾರದ ಸಂಸ್ಥೆಗಳು ನನ್ನ ಕೈಬಿಟ್ಟಿವೆ’’ ಎಂದು ಮಹಿಳೆಯ ಸಹೋದರ ಲೂಕಾ ಫೇಸ್ ಬುಕ್ ನಲ್ಲಿ ಹಾಕಿದ ವೀಡಿಯೊದಲ್ಲಿ ಹೇಳಿದ್ದಾರೆ.
ಇದು ಇಟಲಿಯ ಹತಾಶ ಪರಿಸ್ಥಿತಿಯನ್ನು ತೋರಿಸಿದೆ ಎಂದು ಹೇಳಲಾಗಿದೆ. ಇಟಲಿಯಾದ್ಯಂತ ಬೀಗಮುದ್ರೆ ಘೋಷಿಸಲಾಗಿದ್ದು, ರಸ್ತೆಗಳು ನಿರ್ಜನವಾಗಿವೆ.







