ಕೊರೋನಾ ಹಿನ್ನೆಲೆ : ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟ ಮುಂದೂಡಿಕೆ
ಪುತ್ತೂರು : ವಾಲಿಬಾಲ್ ಅಸೋಸಿಯೇಶನ್ ಹಾಗೂ ಸೆವೆನ್ ಡೈಮಂಡ್ಸ್ ಯೂತ್ ಕ್ಲಬ್ ಪುತ್ತೂರು ಜಂಟಿ ಆಶ್ರಯದಲ್ಲಿ ಮಾ. 21 ರಿಂದ 22ರ ತನಕ ಪುತ್ತೂರಿನಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರ ವಾಲಿಬಾಲ್ ಪಂದ್ಯಾಟವನ್ನು ಹೆಚ್ಚುತ್ತಿರುವ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳು ಮುಂದೂಡಿಕೆ ಮಾಡಲಾಗಿದ್ದು, ಎ.24 ರಿಂದ 26 ರ ತನಕ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಂದ್ಯಾಟ ಸಮಿತಿ ಅಧ್ಯಕ್ಷ ಬೇಬಿಜಾನ್ ತಿಳಿಸಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಸಂಘಟಿಸುತ್ತಿ ರುವ ಹುಮ್ಮಸ್ಸಿನಲ್ಲಿ ಕ್ರೀಡಾಂಗಣ ಸಹಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಅನಿವಾರ್ಯ ಕಾರಣದಿಂದ ಮುಂದೂಡ ಬೇಕಾಗಿ ಬಂದಿದೆ ಎಂದರು.
ವಾಲಿಬಾಲ್ ಪಂದ್ಯಾಟದಲ್ಲಿ ವಿವಿಧ ರಾಜ್ಯಗಳ ತಂಡಗಳು ಹಾಗೂ ರಾಷ್ಟ್ರೀಯ ವಾಲಿಬಾಲ್ ಆಟಗಾರರು ಭಾಗವಹಿಸಬೇಕಾಗಿತ್ತು. ಆದರೆ ಕೊರೋನಾ ವೈರಸ್ ಹರಡುವ ಮುಂಜಾಗ್ರತಾ ಕ್ರಮವಾಗಿ ಅನ್ಯ ರಾಜ್ಯಗಳು ಆಟಗಾರರನ್ನು ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತಿಲ್ಲ. ಈ ಕಾರಣದಿಂದ ಪ್ರಮುಖರು ಚರ್ಚಿಸಿ ಮುಂದೂಡಿಕೆಯ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಪಂದ್ಯಾಟವನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ. ಮಾ.21 ರಿಂದ ನಡೆಯಬೇಕಿದ್ದ ಪಂದ್ಯಾಟವನ್ನು ಎ.24 ರಿಂದ 26 ರ ತನಕ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ತೆಂಕಿಲ ವಿವೇಕಾನಂದದಲ್ಲಿನ ಪೂರ್ವ ನಿರ್ಧರಿತ ಅಂಕಣದಲ್ಲಿ ಹಾಗೂ ಪೂರ್ವ ನಿರ್ಧರಿತ ತಂಡಗಳ ಭಾಗವಹಿಸುವಿಕೆಯೊಂದಿಗೆ ಪಂದ್ಯಾಟ ನಡೆಯಲಿದೆ. ಈ ನಿಟ್ಟಿನಲ್ಲಿ ವಾಲಿಬಾಲ್ ಅಭಿಮಾನಿಗಳು ಸಹಕಾರ ನೀಡಬೇಕು ಎಂದು ಬೇಬಿಜಾನ್ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಜಯರಾಮ ಗೌಡ, ಪಂದ್ಯಾಟ ಸಮಿತಿಯ ಕಾರ್ಯದರ್ಶಿ ಮೋನಪ್ಪ ಎಂ., ಕೋಶಾಧಿಕಾರಿ ಪ್ರದೀಪ್ ಪಿ.ಆರ್., ವಾಲಿಬಾಲ್ ಅಸೋಸಿಯೇಶನ್ ಗೌರವಾಧ್ಯಕ್ಷ ಶಿವರಾಮ ಭಟ್ ಬೀರ್ನಕಜೆ ಉಪಸ್ಥಿತರಿದ್ದರು.







