ಇಲೆಕ್ಟ್ರೊ ಹೋಮಿಯೇಪಥಿಗೆ ಮಾನ್ಯತೆ ಇಲ್ಲ: ಮದ್ರಾಸ್ ಹೈಕೋರ್ಟ್ ತೀರ್ಪು

ಹೊಸದಿಲ್ಲಿ,ಮಾ.13: ಇಲೆಕ್ಟ್ರೊಪತಿ/ ಇಲೆಕ್ಟ್ರೊ ಹೋಮಿಯೊಪತಿ ಚಿಕಿತ್ಸಾ ಪದ್ಧತಿಗೆ ಭಾರತದ ಯಾವುದೇ ಕಾನೂನು ಮಾನ್ಯತೆ ನೀಡಿಲ್ಲವಾದುದರಿಂದ, ಅದರ ಉತ್ತೇಜನಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ತಿಳಿಸಿದೆ.ಇಲೆಕ್ಟ್ರೊಪತಿ ಚಿಕಿತ್ಸಕರು ಸಲ್ಲಿಸಿದ ಅರ್ಜಿಳನ್ನು ತಿರಸ್ಕರಿಸುತ್ತಾ ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರ್ಜಿದಾರರು ನ್ಯಾಯಾಲಯಕ್ಕೆ ಅರ್ಜಿಯ ಜೊತೆ ಸಲ್ಲಿಸಿರುವ ಇಲೆಕ್ಟ್ರೊ ಹೊಮಿಯೊಪಥಿ ಡಿಪ್ಲೊಮಾ ಪ್ರಮಾಣಪತ್ರಗಳು ಯಾವುದೇ ಶಾಸನಬದ್ಧವಾದ ಸಂಸ್ಥೆಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಮಾನ್ಯತೆ ಪಡೆದಿರದ ಖಾಸಗಿ ಸಂಸ್ಥೆಗಳು ನೀಡಿದ್ದುದಾಗಿವೆ. ಈ ಸಂಸ್ಥೆಗಳ ಶಾಸನಾತ್ಮಕ ಮಾನ್ಯತೆಯನ್ನು ದೃಢಪಡಿಸದೆ ಕೋರ್ಸ್‌ಗೆ ಸೇರ್ಪಡೆಗೊಂಡಿರುವುದು, ಅರ್ಜಿದಾರರ ದಾವೆಯ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತದೆಯೆಂದು ನ್ಯಾಯಾಧೀಶೆ ತಿಳಿಸಿದರು. ಇಲೆಕ್ಟ್ರೊಪಥಿ ಕೋರ್ಸ್‌ನಲ್ಲಿ ಡಿಪ್ಲೊಮಾ ಪ್ರಮಾಣಪತ್ರಗಳಿಗೆ ಮಾನ್ಯತೆ ನೀಡಲು ನಿರಾಕರಿಸಿರುವ ತಮಿಳುನಾಡು ಹೊಮಿಯೊಪಥಿ ಮೆಡಿಕಲ್ ಕೌನ್ಸಿಲ್‌ನ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಲೇರಿದ್ದರು.





