ಚಿಕ್ಕಮಗಳೂರು: ಜನರನ್ನು ಆತಂಕಕ್ಕೆ ದೂಡಿದ ಕೊರೋನ; ಪ್ರವಾಸೋದ್ಯಮ, ವ್ಯಾಪಾರದ ಮೇಲೆ ಎಫೆಕ್ಟ್
ಮಂಗಳೂರು ಮೂಲದ ಶಂಕಿತ ರೋಗಿಯ ಕಫ ಪ್ರಯೋಗಾಲಯಕ್ಕೆ

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಮಾ.13: ಕೊರೋನ ವೈರಸ್ ಸೋಂಕು ರೋಗ ಚಿಕ್ಕಮಗಳೂರು ಜನರನ್ನೂ ಆತಂಕಕ್ಕೆ ದೂಡಿದ್ದು, ರಾಜ್ಯದ ಕೆಲವೆಡೆ ಕೊರೋನ ಸೋಂಕು ಪೀಡಿತರು ಪತ್ತೆಯಾಗುತ್ತಿದ್ದಂತೆ ಪ್ರವಾಸಿಗರ ಕೇಂದ್ರವಾಗಿದ್ದ ಜಿಲ್ಲೆಯಲ್ಲಿ ಹೊರ ರಾಜ್ಯ, ಹೊರ ಜಿಲ್ಲೆಗಳ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡಿದೆ. ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳಗಳಾದ ಹೊರನಾಡು, ಶೃಂಗೇರಿ ಹಾಗೂ ಬಾಬಾಬುಡನ್ಗಿರಿ, ಮುಳ್ಳಯ್ಯನಗಿರಿ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದ್ದು, ಕೊರೋನ ವೈರಸ್ ಭೀತಿ ನಗರದ ವ್ಯಾಪಾರೋದ್ಯಮಕ್ಕೂ ಬಿಸಿ ಮುಟ್ಟಿಸಿದೆ.
ಕಳೆದೊಂದು ವಾರದಿಂದ ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿಗೆ ಸಂಬಂಧಿಸಿದ ಸುದ್ದಿಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಬಿತ್ತರವಾಗುತ್ತಿದ್ದು, ಶನಿವಾರ, ರವಿವಾರ ಸೇರಿದಂತೆ ರಜಾ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದು, ಇದೀಗ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ. ವಿಶೇಷವಾಗಿ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಹಾಗೂ ಬಾಬಾ ಬುಡನ್ಗಿರಿಗೆ ಹೊರ ಜಿಲ್ಲೆ, ರಾಜ್ಯಗಳಿಂದ ಪರಿಸರ ಪ್ರಿಯರು ಹೆಚ್ಚು ಆಗಮಿಸುತ್ತಿದ್ದರು. ಆದರೆ ಕಳೆದೊಂದು ವಾರದಿಂದ ಈ ಎರಡು ಪ್ರವಾಸಿತಾಣಗಳಲ್ಲಿ ಜನರ ದಂಡು ನಾಪತ್ತೆಯಾಗಿದೆ. ಶನಿವಾರ, ರವಿವಾರದಂದು ನಗರದ ಐಜಿ ರಸ್ತೆಗಳಲ್ಲಿನ ಬಹುತೇಕ ಲಾಡ್ಜುಗಳು ಭರ್ತಿಯಾಗಿ ರಸ್ತೆ ಪೂರ್ತಿ ಪ್ರವಾಸಿಗರ ವಾಹನಗಳು ತುಂಬಿ ತುಳುಕುತ್ತಿದ್ದ ದೃಶ್ಯ ಕಳೆದೊಂದು ವಾರದಿಂದ ಕಂಡು ಬರುತ್ತಿಲ್ಲ. ಪರಿಣಾಮ ನಗರದ ಹೊಟೇಲ್, ಲಾಡ್ಜ್ ಗಳ ಮಾಲಕರು ವ್ಯಾಪಾರ ಇಲ್ಲದೇ ಕೈಕಟ್ಟಿ ಕೂರುವಂತಾಗಿದೆ.
ಇನ್ನು ಕೊರೋನ ವೈರಸ್ ಸೋಂಕು ಹರಡುತ್ತಿರುವ ಸುದ್ದಿಯಿಂದಾಗಿ ಜಿಲ್ಲೆಯ ಹೆಸರಾಂತ ಯಾತ್ರಾ ಸ್ಥಳವಾಗಿರುವ ಶೃಂಗೇರಿ ಶಾರದಾಂಬ ದೇವಾಲಯ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಗಳಿಗೂ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದೇ ದೇವಾಲಯಗಳೂ ಬಿಕೋ ಎನ್ನುತ್ತಿವೆ. ಈ ಭಾಗದಲ್ಲಿ ಹೊರ ಜಿಲ್ಲೆಗಳ ಪ್ರವಾಸಿಗರನ್ನು ನೆಚ್ಚಿಕೊಂಡು ನೆಲೆಕಂಡುಕೊಂಡಿದ್ದ ಹೊಟೇಲ್ಗಳು, ಲಾಡ್ಜ್ ಗಳು, ಕಾಫಿ ಶಾಪ್ಗಳಿಗೂ ವ್ಯಾಪಾರ ಇಲ್ಲದಂತಾಗಿದೆ.
ಕುಕ್ಕುಟೋದ್ಯಮಕ್ಕೂ ತಟ್ಟಿದ ಬಿಸಿ: ಕೊರೋನ ವೈರಸ್ ಸೋಂಕಿನ ಭೀತಿ ಜಿಲ್ಲೆಯಲ್ಲಿ ಕುಕ್ಕುಟೋದ್ಯಮದ ಮೇಲಂತೂ ಭಾರೀ ವ್ಯತಿರಿಕ್ತ ಪರಿಣಾಮ ಬೀರಿದ್ದು, ನಗರದಲ್ಲಿ ಒಂದು ಕೆಜಿ ಕೋಳಿ ಮಾಂಸ 40-60 ರೂ.ಗೆ ಬಿಕರಿಯಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 1 ಕೆಜಿ ಕೋಳಿ ಮಾಂಸದ ಬೆಲೆ 70ರಿಂದ 90 ಇದೆ. ಜಿಲ್ಲೆಯ ಮಲೆನಾಡು ಸೇರಿದಂತೆ ಎನ್.ಆರ್.ಪುರ, ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿನ ಕೋಳಿ ಫಾರ್ಮ್ಗಳಲ್ಲಿ ಸಾಕಣೆ ಮಾಡಿರುವ ಕೋಳಿಗಳನ್ನು ಕೇಳುವವರಿಲ್ಲದಂತಾಗಿದೆ. ಕೋಳಿ ಫಾರ್ಮ್ಗಳ ಮಾಲಕರು ಸಿಕ್ಕ ಬೆಲೆಗೆ ಕೋಳಿಗಳನ್ನು ಮಾರುತ್ತಿದ್ದಾರೆಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಕೋಳಿ ಮಾಂಸದ ಬೆಲೆ ಕಡಿಮೆಯಾಗಿದ್ದರೂ ಕುರಿ ಮಾಂಸ ಮತ್ತು ಮೀನು ಧಾರಣೆಯಲ್ಲಿ ಹೆಚ್ಚು ವ್ಯತ್ಯಾಸವಾಗಿಲ್ಲವಾಗಿದ್ದು, ಕೋಳಿ ಮಾಂಸ ಪ್ರಿಯರು ಇದೀಗ ಮೀನು ಖರೀದಿಗೆ ಮುಗಿಬೀಳುವಂತಾಗಿದೆ.
ಕೊರೋನ ವೈರಸ್ ಸೋಂಕು ಭೀತಿಯ ಹಿನ್ನೆಲೆಯಲ್ಲಿ ನಗರದ ಬಸ್ ನಿಲ್ದಾಣ, ಆಸ್ಪತ್ರೆ, ಪಾರ್ಕ್ಗಳಲ್ಲಿ ಬಾಯಿಗೆ ಮಾಸ್ಕ್ ಧರಿಸಿ ಓಡಾಡುವವರ ಸಂಖ್ಯೆ ಹೆಚ್ಚಾಗಿದ್ದು, ಜಿಲ್ಲಾದ್ಯಂತ ಬಾಯಿಗೆ ಕಟ್ಟುವ ಮಾಸ್ಕ್ ಗೆ ಭಾರೀ ಬೇಡಿಕೆ ಇದೆ. 10 ರೂ. ಗೆ ಸಿಗುತ್ತಿದ್ದ ಮಾಸ್ಕ್ ಬೆಲೆ ಇದೀಗ 50-60 ರೂ.ಗೆ ಏರಿದೆ.
ಇನ್ನು ಕರೋನ್ ವೈರಸ್ ಭೀತಿಯಿಂದಾಗಿ ರಾಜ್ಯ ಸರಕಾರ ರಾಜ್ಯದ ಎಲ್ಲ ಶಾಲೆ ಮಾ.14ರಿಂದ ರಜೆ ಘೋಷಣೆ ಮಾಡಿದ್ದು, ಎಲ್ಲಾ ಕಾಲೇಜುಗಳಿಗೆ ಮಾ.28ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಸರಕಾರ ಮದುವೆ, ಜಾತ್ರೆಗಳ ಮೇಲೂ ನಿರ್ಬಂಧ ಹೇರಿದ್ದು, ಜಿಲ್ಲೆಯಲ್ಲಿ ಈಗಾಗಾಲೇ ನಿಗದಿಯಾಗಿರುವ ಮದುವೆ, ಜಾತ್ರಾ ಮಹೋತ್ಸವಗಳ ಬಗ್ಗೆ ಜಿಲ್ಲಾಧಿಕಾರಿ ಕ್ರಮಕೈಗೊಳ್ಳಲಿದ್ದು, ಈ ಸಂಬಂಧ ಶನಿವಾರ ಅಧಿಕೃತ ಆದೇಶ ಹೊರಡಿಸಲಿದ್ದಾರೆ.
ಗುರುವಾರ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಗೆ ಮೂಡಿಗೆರೆಯಿಂದ ಜ್ವರದ ತಪಾಸಣೆಗೆ ಬಂದಿದ್ದ ವ್ಯಕ್ತಿಯೊಬ್ಬರ ಕಫವನ್ನು ಕೊರೋನ ವೈರಸ್ ಪರೀಕ್ಷೆಗೆ ಹಾಸನಕ್ಕೆ ಕೊಂಡೊಯ್ಯಲಾಗಿದೆ. ಮಂಗಳೂರು ಮೂಲದ ಈ ವ್ಯಕ್ತಿ ಕಳೆದ 15 ದಿನಗಳ ಹಿಂದೆ ದುಬೈಯಿಂದ ಬಂದಿದ್ದು, ಕಳೆದ ಮಂಗಳವಾರ ಅವರು ಮಂಗಳೂರಿನಿಂದ ಮೂಡಿಗೆರೆಯಲ್ಲಿರುವ ತಂಗಿಯ ಮನೆಗೆ ಆಗಮಿಸಿದ್ದರು. ಈ ವೇಳೆ ಅವರು ಶೀತ ಹಾಗೂ ಜ್ವರದಿಂದ ಬಳಲಿದ್ದು, ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಸ್ಪತ್ರೆಗೆ ತಪಾಸಣೆಗೆ ಆಗಮಿಸಿದ್ದರು. ಇವರನ್ನು ತಪಾಸಣೆ ಮಾಡಿದ ವೈದ್ಯರು ಜ್ವರಕ್ಕೆ ಔಷದೋಪಚಾರ ಮಾಡಿದ್ದಾರಾದರೂ ವಿದೇಶದಿಂದ ಬಂದಿರುವ ಹಿನ್ನೆಲೆಯಲ್ಲಿ ಕೊರೋನ ಶಂಕೆಯ ಮೇರೆಗೆ ಆ ವ್ಯಕ್ತಿಯ ಕಫ ಸಂಗ್ರಹಿಸಿ ಹಾಸನದ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಿದ್ದಾರೆಂದು ತಿಳಿದುಬಂದಿದೆ. ಪ್ರಯೋಗಾಲಯದ ವರದಿ ಬಂದ ನಂತರವಷ್ಟೇ ಈ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಲಿದ್ದು, ವ್ಯಕ್ತಿಯಲ್ಲಿ ಕೊರೋನ ವೈರಸ್ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ, ಮುನ್ನೆಚ್ಚರಿಕೆ ಕ್ರಮವಾಗಿ ಕಫವನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವ್ಯಕ್ತಿಯನ್ನು ಪ್ರತ್ಯೇಕ ವಾರ್ಡ್ನಲ್ಲಿ ನಿಗಾದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿನಿಂದ ಓರ್ವ ವ್ಯಕ್ತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಮಾ.14ರಿಂದ 1ರಿಂದ 6ನೆ ತರಗತಿವರೆಗಿನ ಎಲ್ಲ ಪರೀಕ್ಷೆಗಳನ್ನು ಸ್ಥಗಿತಗೊಳಿಸಿ ಬೇಸಿಗೆ ರಜೆ ಘೋಷಿಸಲು ಸರಕಾರ ಆದೇಶ ನೀಡಿದೆ. 7-ರಿಂದ 10ನೇ ತರಗತಿ ಮಕ್ಕಳಿಗೆ ಮಾ.14ರಿಂದ ರಜೆ ನೀಡಿದ್ದು, ಪರೀಕ್ಷಾ ದಿನಗಳಂದು ಪರೀಕ್ಷೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. 7ರಿಂದ 9ನೇ ತರಗತಿ ಮಕ್ಕಳಿಗೆ ಮಾ.23ರ ಒಳಗೆ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಶಿಕ್ಷಣ ಇಲಾಖೆಗೆ ಸರಕಾರ ಆದೇಶ ನೀಡಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ನಿಗದಿಯಾದ ದಿನಾಂಕದಂದೇ ಪರೀಕ್ಷೆ ನಡೆಯಲಿದ್ದು, ಹಾಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ.







