ಸ್ಪರ್ಧೆಯಲ್ಲಿ ಮುಂದುವರಿಯಲು ಕ್ರೀಡಾ ಸಚಿವರ ಸಲಹೆ ಕೇಳಿದ ಸಿಂಧು
ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್

ಹೊಸದಿಲ್ಲಿ, ಮಾ.13: ಕೋವಿಡ್-19 ವೈರಸ್ ಭೀತಿಗೆ ಒಳಗಾಗಿರುವ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಆಡುವುದನ್ನು ಮುಂದುವರಿಸಬೇಕೇ, ಬೇಡವೇ ಎಂಬ ಕುರಿತು ಕ್ರೀಡಾ ಸಚಿವ ಕಿರಣ್ ರಿಜಿಜು ಅವರಿಂದ ಸಲಹೆ ಸೂಚನೆ ಪಡೆದಿದ್ದಾರೆ.
ನೀವು ಬ್ಯಾಡ್ಮಿಂಟನ್ ಆಟ ಆಡುವುದನ್ನು ಮುಂದುವರಿಸಿ, ಬ್ರಿಟನ್‌ನ ಸುರಕ್ಷಾ ಮಾರ್ಗಸೂಚಿಯನ್ನು ಪಾಲಿಸಿರಿ ಎಂದು ಸಿಂಧುಗೆ ಸಲಹೆ ನೀಡಿದ್ದೇನೆ ಎಂದು ರಿಜಿಜು ತಿಳಿಸಿದ್ದಾರೆ. ಆರೋಗ್ಯ ಸಚಿವಾಲಯದ ಮಾರ್ಗಸೂಚಿಯನ್ನು ಪಾಲಿಸಿರಿ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ದೊಡ್ಡ ಸಂಖ್ಯೆಯ ಜನರು ಸೇರದಂತೆ ನೋಡಿಕೊಳ್ಳಿ ಎಂದು ಕ್ರೀಡಾ ಸಚಿವಾಲಯ ಗುರುವಾರ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಸಲಹೆ ನೀಡಿತ್ತು.
ವಿದೇಶದಲ್ಲಿ ನಡೆಯುವ ಟೂರ್ನಿಗಳಲ್ಲಿ ತಂಡಗಳನ್ನು ಕಳುಹಿಸಿಕೊಡುವಾಗ ಎಚ್ಚರಿಕೆವಹಿಸಬೇಕೆಂದು ರಾಷ್ಟ್ರೀಯ ಕ್ರೀಡಾ ಸಂಘಟನೆಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿತ್ತು. ‘‘ಲಂಡನ್‌ನಿಂದ ಸಿಂಧು ನನಗೆ ದೂರವಾಣಿ ಕರೆ ಮಾಡಿದ್ದರು. ಒಲಿಂಪಿಕ್ಸ್ ಕ್ವಾಲಿಫಿಕೇಶನ್‌ನಂತಹ ಪ್ರಮುಖ ಟೂರ್ನಿಗಳಲ್ಲಿ ಆಡುತ್ತಿರುವ ಬೇರೆ ದೇಶಗಳ ಆಟಗಾರರ ವಿರುದ್ಧ ಆಡುವುದನ್ನು ಮುಂದುವರಿಸಿ. ಆಯಾ ದೇಶಗಳ ಮಾರ್ಗಸೂಚಿಯನ್ನು ಪಾಲಿಸಿ. ಎಲ್ಲರೂ ನಿರ್ದಿಷ್ಟ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು’’ ಎಂದು ಭಾರತದ ಕ್ರೀಡಾ ಪ್ರಾಧಿಕಾರದ ಸಾಮಾನ್ಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ರಿಜಿಜು ಮಾತನಾಡುತ್ತಾ ತಿಳಿಸಿದರು. ಆರೋಗ್ಯ ಸಚಿವಾಲಯ ಮಾರ್ಗ ಸೂಚಿಯಲ್ಲಿ ಗೊಂದಲವಿದೆ ಎಂದು ಶಟ್ಲರ್ ಪಿ.ಕಶ್ಯಪ್ ಅವರು ಟ್ವಿಟರ್‌ನಲ್ಲಿ ತಿಳಿಸಿರುವ ಕುರಿತು ಕೇಳಿದಾಗ, ವಿದೇಶದಲ್ಲಿ ಆಡುತ್ತಿರುವ ಆಟಗಾರರು ಸ್ಪರ್ಧೆಯಲ್ಲಿ ಮುಂದುವರಿಯಲಿ ಎಂದು ನಾನು ಸ್ಪಷ್ಟಪಡಿಸಿದ್ದೇನೆ. ಪ್ರಧಾನಿ ಮೋದಿ ಅವರು ವೈಯಕ್ತಿಕವಾಗಿ ಎಲ್ಲ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿ ನಾವು ಗಂಭೀರವಾಗಿದ್ದೇವೆ. ದೊಡ್ಡ ಸಂಖ್ಯೆಯ ಜನರ ಸಮ್ಮುಖದಲ್ಲಿ ಯಾವುದೇ ಕ್ರೀಡಾ ಸ್ಪರ್ಧೆ ನಡೆಯುವಂತಿಲ್ಲ ಎಂದರು.
ಅಶ್ವಿನಿ-ಸಿಕ್ಕಿ ರೆಡ್ಡಿ ಗೆ ಹೀನಾಯ ಸೋಲು
ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಾಕಣದಲ್ಲಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ಸಿಂಧು ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ನಾಲ್ಕನೇ ಶ್ರೇಯಾಂಕದ ನೊರೊಮಿ ಒಕುಹರಾ ಸವಾಲನ್ನು ಎದುರಿಸಲಿದ್ದಾರೆ.
ಬರ್ಮಿಂಗ್‌ಹ್ಯಾಮ್, ಮಾ.13: ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸೋತು ನಿರ್ಗಮಿಸಿದ್ದಾರೆ. ಇಲ್ಲಿ ಗುರುವಾರ ರಾತ್ರಿ ಕೇವಲ 38 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಡಬಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ 29ನೇ ರ್ಯಾಂಕಿನ ಅಶ್ವಿನಿ-ಸಿಕ್ಕಿ ಜೋಡಿ ಜಪಾನ್‌ನ ಏಳನೇ ಶ್ರೇಯಾಂಕದ ಜೋಡಿ ಮಿಸಾಕಿ ಮಟ್ಸುಟೊಮೊ ಹಾಗೂ ಅಯಾಕಾ ಟಕಹಶಿ ವಿರುದ್ಧ 13-21, 14-21 ನೇರ ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಅಶ್ವಿನಿ ಹಾಗೂ ಸಿಕ್ಕಿ ಸತತ 8ನೇ ಬಾರಿ ಜಪಾನ್‌ನ ಜೋಡಿಯ ವಿರುದ್ಧ ಸೋತಿದ್ದಾರೆ.







