ವೆಬ್‌ಶೋದಲ್ಲಿ ಧಾರ್ಮಿಕ ಭಾವನೆಗಳಿಗೆ ಚ್ಯುತಿ ಆರೋಪ : ರವೀನಾ,ಫರ್ಹಾಖಾನ್, ಭಾರತಿಸಿಂಗ್‌ಗೆ ಸದ್ಯ ರಿಲೀಫ್
ಹೊಸದಿಲ್ಲಿ,ಮಾ.13: ವೆಬ್‌ಶೋ ಒಂದರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ುುಂಟು ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ತಾರೆ, ರವೀನಾ ಟಂಡನ್, ನಿರ್ದೇಶಕಿ ಫರ್ಹಾ ಖಾನ್ ಹಾಗೂ ಹಾಸ್ಯನಟಿ ಭಾರತಿ ಸಿಂಗ್ ವಿರುದ್ಧ ಯಾವುದೇ ‘ನಿರ್ಬಂಧಾತ್ಮಕ ಕ್ರಮ’ಗಳನ್ನು ಕೈಗೊಳ್ಳದಂತೆ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಗುರುವಾರ ಪಂಜಾಬ್ ಸರಕಾರಕ್ಕೆ ಆದೇಶ ನೀಡಿದೆ. ತಮ್ಮ ವಿರುದ್ಧ ಸಲ್ಲಿಸಲಾಗಿದ್ದ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಈ ಮೂವರು ನ್ಯಾಯಾಯದ ಮೆಟ್ಟಲೇರಿದ್ದರು.
ಫ್ಲಿಪ್‌ಕಾರ್ಟ್ ಪ್ರಸಾರ ಮಾಡಿದ್ದ ‘ಬ್ಯಾಕ್‌ಬೆಂಚರ್’ಸ ಎಂಬ ವೆಬ್‌ಶೋನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆಂಬ ಆರೋಪದಲ್ಲಿ ಈ ಮೂವರ ವಿರುದ್ಧ ಪಂಜಾಬ್‌ನಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಕಳೆದ ವರ್ಷದ ಆಕ್ಟೋಬರ್ 19ರಿಂದ ಪ್ರಸಾರವಾಗುತ್ತಿರುವ ದಿ ಬ್ಯಾಕ್‌ಬೆಂಚರ್ಸ್ ಕಾಮಿಡಿ ವೆಬ್ ಶೋಗೆ ಬಾಲಿವುಡ್ ನಿರ್ದೇಶಕಿ ಫರ್ಹಾ ಖಾನ್ ನಿರೂಪಕಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಬಾಲಿವುಡ್‌ನ ಹಾಗೂ ಕ್ರೀಡಾರಂಗದ ಖ್ಯಾತನಾಮರನ್ನು ಆಹ್ವಾನಿಸಲಾಗುತ್ತದೆ ಹಾಗೂ ಅವರ ಸಾಮಾನ್ಯ ಜ್ಞಾನವನ್ನು ಒರೆಗೆ ಹಚ್ಚಲಾಗುತ್ತದೆ.
2019ರ ನವೆಂಬರ್ 30ರಂದು ಪ್ರಸಾರವಾದ 14ನೇ ಎಪಿಸೋಡ್‌ನಲ್ಲಿ ತಾರೆಯರಾದ ರವೀನಾ ಟಂಡನ್ ಹಾಗೂ ಭಾರತಿ ಸಿಂಗ್ ಪಾಲ್ಗೊಂಡಿದ್ದರು. ಈ ಶೋದಲ್ಲಿ ನಿರೂಪಕಿ ಫರ್ಹಾಖಾನ್ ಅವರು ‘ಹಲ್ಲೆಲುಜಾ’ ಎಂಬ ಪದವನ್ನು ಉಚ್ಚರಿಸುವಂತೆ ಹಾಗೂ ಆ ಪದದ ಅರ್ಥವನ್ನು ವಿವರಿಸುವಂತೆ ಇವರಿಬ್ಬರಿಗೆ ತಿಳಿಸಿದ್ದರು. ರವೀನಾ ಟಂಡನ್ ಆ ಪದವನ್ನು ಸರಿಯಾಗಿ ಉಚ್ಚರಿಸಿದರಾದರೂ, ಅದರ ಅರ್ಥವನ್ನು ವಿವರಿಸಲು ಸಾಧ್ಯವಾಗಲಿಲ್ಲ. ಭಾರತಿ ಸಿಂಗ್ ಅವರು ಪದವನ್ನು ತಪ್ಪಾಗಿ ಉಚ್ಚರಿಸಿದಲ್ಲದೆ, ತಪ್ಪು ಅರ್ಥವನ್ನು ಹೇಳಿದ್ದರು.
ಹಲ್ಲೆಲುಜಾ ಪದವನ್ನು ಹಾಸ್ಯಕ್ಕೆ ಬಳಸಿಕೊಳ್ಳುವ ಮೂಲಕ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟವಾಡಲಾಗಿದೆ ಎಂದು ಆರೋಪಿಸಿ ರವೀನಾ ಟಂಡನ್,ಫರ್ಹಾಖಾನ್ ಹಾಗೂ ಭಾರತಿ ಸಿಂಗ್ ವಿರುದ್ಧ ಪಂಜಾಬ್ ಹಾಗೂ ಮಹಾರಾಷ್ಟ್ರದ ವಿವಿಧೆಡೆ ಒಟ್ಟು 13 ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು.







