ಕಲಬುರಗಿ: ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿಗೆ ಗಲ್ಲು ಶಿಕ್ಷೆ

ಕಲಬುರಗಿ, ಮಾ.13: ಚಿಂಚೋಳಿ ತಾಲೂಕಿನ ಗ್ರಾಮವೊಂದರ 8 ವರ್ಷದ ಬಾಲಕಿಯ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣದ ಆರೋಪಿಗೆ 2ನೇ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಸುಲೆಪೇಟ್ ಗ್ರಾಮದ ನಿವಾಸಿ ಯಲ್ಲಪ್ಪ ಮಹಾದೇವಪ್ಪ ಮರಣದಂಡನೆಗೆ ಗುರಿಯಾದ ಆರೋಪಿ. 2019 ಡಿಸೆಂಬರ್ ರಲ್ಲಿ 8 ವರ್ಷದ ಬಾಲಕಿಯನ್ನು ಅಂಗನವಾಡಿಯ ಹಿಂದುಗಡೆ ಅತ್ಯಾಚಾರವೆಸಗಿ, ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಲ್ಲದೇ, ಸಾಕ್ಷಿ ನಾಶ ಮಾಡಲು ಯತ್ನಿಸಿದ್ದಾನೆ ಎಂಬುದು ವಿಚಾರಣೆಯಲ್ಲಿ ಸಾಬೀತಾಗಿದೆ.
ಪ್ರಕರಣದ ತನಿಖೆ ನಡೆಸಿದ ಶಂಕರ ಗೌಡವಿ ಪಾಟೀಲ್, ಪೋಕ್ರೋ ಕಾಯ್ದೆ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 2ನೇ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಗೋಪಾಲಪ್ಪ, ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ, ಕಲಂ 366(ಎ) ಅಡಿಯಲ್ಲಿನ ಅಪರಾಧಕ್ಕೆ 10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ಹಾಗೂ ಕಲಂ 201ರ ಅಪರಾಧಕ್ಕೆ 7 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ (ಮೋಕ್ಟೋ)ಎಲ್.ವಿ.ಚಟ್ಟಾಳಕರ ವಾದ ಮಂಡಿಸಿದ್ದರು.







