'ಮೈಸೂರಿನಲ್ಲಿ ವ್ಯಕ್ತಿಗೆ ಕೊರೋನ': ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುಳ್ಳು ಸುದ್ದಿ
ಜನರಲ್ಲಿ ಆತಂಕ

ಸಾಂದರ್ಭಿಕ ಚಿತ್ರ
ಮೈಸೂರು,ಮಾ.13: ವಿಶ್ವವನ್ನೇ ನಡುಗಿಸುತ್ತಿರುವ ಮಹಾಮಾರಿ ಕೊರೋನ ವೈರಸ್ ರಾಜ್ಯಕ್ಕೆ ಕಾಲಿಟ್ಟಿದ್ದು, ಜನರಲ್ಲಿ ಆತಂಕ ಮನೆಮಾಡಿರುವ ಬೆನ್ನಲ್ಲೇ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಮೈಸೂರು ಜಿಲ್ಲೆಯ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಲಾಗುತ್ತಿದೆ.
ಕೆಲವು ಸಮಾಜಿಕ ಜಾಲತಾಣದಲ್ಲಿ ರಾಜ್ಯದ ಸುದ್ದಿವಾಹಿನಿಯೊಂದರ ಲೋಗೋ ಬಳಸಿ ನಂಜನಗೂಡಿನ ಯುವತಿಯೊಬ್ಬರಲ್ಲಿ ಕೊರೋನ ವೈರಸ್ ಪತ್ತೆಯಾಗಿದೆ ಎಂಬ ಸುಳ್ಳು ಸುದ್ದಿಯನ್ನು ಹರಿಯಬಿಡಲಾಗಿದ್ದು, ನಂಜನಗೂಡು ಮತ್ತು ಜಿಲ್ಲೆಯ ಜನತೆ ಕಂಗಾಲಾಗಿದ್ದಾರೆ.
ಜಿಲ್ಲಾಡಳಿತಕ್ಕೆ ಮಾಹಿತಿ ಇಲ್ಲದ ಸುದ್ದಿಗಳು ಸಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಳ್ಳುತಿದ್ದು, ಜನರಲ್ಲಿ ಭಯವನ್ನು ತಂದೊಡ್ಡುತ್ತಿವೆ. ಸರಕಾರ ಕೊರೋನ ನಿಯಂತ್ರಣಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತಿದ್ದರು. ಇಂತಹ ಸುಳ್ಳು ಸುದ್ದಿಗಳು ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ.
ನಂಜನಗೂಡು ನಗರ ವಾಸಿಗೆ ಕೊರೋನ ವೈರಸ್ ಇದೆ ಎಂಬ ಸುದ್ದಿಯಿಂದ ನಂಜನಗೂಡಿನ ಜನತೆ ಆತಂಕಕ್ಕೊಳಗಾಗಿದ್ದಾರೆ. ಜೊತೆಗೆ ಹುಡುಗಿಯ ಭಾವಚಿತ್ರವನ್ನು ಹಾಕಿ ಭಿತ್ತರಿಸುತ್ತಿರುವುದು ಮತ್ತಷ್ಟು ಬೇಸರ ಮೂಡಿಸಿದೆ. ಮತ್ತೊಂದೆಡೆ ಪಿರಿಯಾಪಟ್ಟಣದ ವ್ಯಕ್ತಿಯೊಬ್ಬರು ಕೊರೋನ ವೈರಸ್ನಿಂದ ಬಳಲುತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಜಿಲ್ಲಾಡಳಿತ ಮತ್ತು ಸ್ಥಳೀಯ ಅಧಿಕಾರಿಗಳು ಸುಳ್ಳು ಎಂದು ಹೇಳುತಿದ್ದಾರೆ. ಇಂತಹ ಸುದ್ದಿಗಳನ್ನು ಹರಿಬಿಟ್ಟ ಕುತಂತ್ರಿಗಳನ್ನು ಪತ್ತೆ ಹಚ್ಚಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.
ಮೈಸೂರು ಜಿಲ್ಲೆಯಲ್ಲಿ ಕೊರೋನ ಸೋಂಕಿತ ವೈರಸ್ ಇಲ್ಲ. ಇಂತಹ ಸುಳ್ಳು ಸುದ್ದಿಗಳು ಎಲ್ಲಿಂದ ಸೃಷ್ಟಿಯಾಗುತ್ತಿವೆಯೋ ಗೊತ್ತಿಲ್ಲ. ಕೆಲವು ಮಾಧ್ಯಮಗಳು ಪರಿಶೀಲನೆ ನಡೆಸದೆ ತಮಗಿಷ್ಟ ಬಂದ ಸುದ್ದಿಗಳನ್ನು ಬಿತ್ತರಿಸಿ ಜನರಲ್ಲಿ ಆತಂಕ ಉಂಟುಮಾಡುತ್ತಿವೆ. ಯಾವುದೇ ವ್ಯಕ್ತಿಯಲ್ಲಿ ಕೊರೋನ ಕಂಡು ಬಂದರೆ ನಾವೇ ಮಾಧ್ಯಮಗಳಿಗೆ ತಿಳಿಸುತ್ತೇವೆ.
-ಡಾ.ವೆಂಕಟೇಶ್, ಜಿಲ್ಲಾ ಆರೋಗ್ಯಾಧಿಕಾರಿ







