ಅಕ್ರಮ ಹಣ ಠೇವಣಿಯ ತನಿಖೆಗೆ ಸದನ ಸಮಿತಿ ರಚನೆ: ಸಚಿವ ಈಶ್ವರಪ್ಪ

ಬೆಂಗಳೂರು, ಮಾ 13: ನಿಯಮಬಾಹಿರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದ ಹಗರಣದ ಕುರಿತ ತನಿಖೆಗೆ ಸದನ ಸಮಿತಿ ರಚನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಶುಕ್ರವಾರ ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ರಘುನಾಥ್ ಮಲ್ಕಾಪುರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ವಿಭಾಗಗಳಲ್ಲಿ ಬಿಡುಗಡೆಯಾಗಿದ್ದ ಅನುದಾನವನ್ನು ಬಳಕೆ ಮಾಡಿಕೊಳ್ಳದೆ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವುದು ಗಮನಕ್ಕೆ ಬಂದಿದೆಯಾ ಎಂದು ಪ್ರಶ್ನಿಸಿದರು.
ನಿಯಮಬಾಹಿರವಾಗಿ ಅಧಿಕಾರಿಗಳು ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ವಿಭಾಗಕ್ಕೆ ಬಿಡುಗಡೆಯಾದ ಅನುದಾನ ಬಳಕೆಯಲ್ಲಿ 600 ಕೋಟಿ ಅಕ್ರಮ ನಡೆದಿದೆ. ಬ್ಯಾಂಕ್‌ನವರು, ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ತನಿಖೆಗೆ ಸದನ ಸಮಿತಿ ನೇಮಿಸಿ ಎಂದು ಮನವಿ ಮಾಡಿದರು.
ಇದ್ಕಕೆ ದನಿಗೂಡಿಸಿದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪಕ್ಷಾತೀತವಾಗಿ ಈ ಕುರಿತು ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಸದನ ಸಮಿತಿ ಮಾಡುವುದಾಗಿ ಈಶ್ವರಪ್ಪ ಹೇಳಿದರು. ಸರಕಾರದ ಪರವಾಗಿ ಉತ್ತರ ನೀಡಿದ ಸಚಿವ ಈಶ್ವರಪ್ಪ, ಯಾರನ್ನು ರಕ್ಷಣೆ ಮಾಡೋ ಕೆಲಸ ಸರಕಾರ ಮಾಡುವುದಿಲ್ಲ. ಅಧಿಕಾರಿಗಳು ಯಾವುದೇ ರೀತಿಯಲ್ಲೂ ಇಲಾಖೆಗೆ ಸೂಚನೆ ನೀಡದೇ ಸಿಂಡಿಕೇಟ್ ಬ್ಯಾಂಕಿನಲ್ಲಿ 90 ಖಾತೆ ತೆರೆದಿದ್ದಾರೆ. ಈ ಕುರಿತು ಈಗಾಗಲೇ ತನಿಖೆ ನಡೆದಿದೆ ಎಂದರು.
200 ಕೋಟಿ ಇದರಲ್ಲಿ ಲೂಟಿಯಾಗಿರುವ ಸಂಶಯವಿದೆ. ಸಿಂಡಿಕೇಟ್ ಬ್ಯಾಂಕ್‌ನವರು 80 ಕೋಟಿ ಕೊಡುವುದಾಗಿ ಹೇಳುತ್ತಿದ್ದಾರೆ. ಆದರೆ, ಸರಕಾರದ ಅನುಮತಿಯಿಲ್ಲದೆ ತೆಗೆದಿರುವ ಈ ಖಾತೆಗಳ ಕುರಿತು ತನಿಖೆಗೆ ಸಿದ್ಧ ಎಂದರು. ಇದೇ ವೇಳೆ ಸಮಗ್ರ ತನಿಖೆಗಾಗಿ ಸದನ ಸಮಿತಿ ಮಾಡುವಂತೆ ಬಿಜೆಪಿ ಸದಸ್ಯರಾದ ರವಿಕುಮಾರ್, ಆಯನೂರು ಮಂಜುನಾಥ್ ಮನವಿ ಮಾಡಿದರು. ಆಗ ಸಚಿವ ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ವಿಭಾಗಗಳಿಗೆ ಬಿಡುಗಡೆಯಾದ ಹಣ ಅಕ್ರಮವಾಗಿ ಠೇವಣಿಯಾದ ಕುರಿತು ತನಿಖೆಗೆ ಸದನ ಸಮಿತಿ ರಚನೆ ಮಾಡುವುದಾಗಿ ಘೋಷಿಸಿದರು







