ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಶಾಸಕಿ ಸೌಮ್ಯಾರೆಡ್ಡಿ ಒತ್ತಾಯ

ಬೆಂಗಳೂರು, ಮಾ. 13: ಮಹಿಳಾ ಸಬಲೀಕರಣ ಕೇವಲ ಭಾಷಣಕ್ಕೆ ಸೀಮಿತವಾಗಿದೆ. ನಿಜಕ್ಕೂ ಮಹಿಳಾ ಸಬಲೀಕರಣ, ಸಂವಿಧಾನದ ಆಶಯಗಳನ್ನು ಈಡೇರಿಸುವ ಉದ್ದೇಶವಿದ್ದರೆ ಶಾಸನಸಭೆಯಲ್ಲಿಯೂ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಕಾಂಗ್ರೆಸ್ ಸದಸ್ಯೆ ಸೌಮ್ಯಾ ರೆಡ್ಡಿ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸದನದಲ್ಲಿ ಪ್ರಸ್ತುತ 11ಮಂದಿ ಸದಸ್ಯರಿದ್ದೇವೆ. ಮೀಸಲಾತಿ ಕಲ್ಪಿಸಿದರೆ ಮಾತ್ರ ಈ ಸಂಖ್ಯೆ ಹೆಚ್ಚಳವಾಗಲು ಸಾಧ್ಯ ಎಂದು ಪ್ರತಿಪಾದಿಸಿದರು.
ಶಾಸಕಿಯಾಗಿ ಆಯ್ಕೆಯಾಗಿದ್ದರೂ ಹೊರಗಡೆ ನನ್ನನ್ನು ಇನ್ನೂ ಶಾಸಕಿ ಎಂದು ಗುರುತಿಸುತ್ತಿಲ್ಲ. ಸಿಎಂ ಬಿಎಸ್‌ವೈ ಅವರ ಹುಟ್ಟುಹಬ್ಬದ ದಿನದಂದು ಶುಭಾಶಯ ಕೋರಲು ಹೋಗಿದ್ದೆ. ಈ ವೇಳೆ ಪೊಲೀಸರು ನೀವು ಯಾರು ಎಂದು ಕೇಳಿದ್ದರು. ನಾವು ಗುರುತಿನ ಚೀಟಿ ತೋರಿಸುವ ಸ್ಥಿತಿಯಿದೆ ಎಂದು ಅಳಲು ತೋಡಿಕೊಂಡರು.
ಪ್ರತಿಭಟನೆಗೆ ಅವಕಾಶವಿಲ್ಲವೇ?: ಅಭಿಪ್ರಾಯ ಭೇದಗಳಿದ್ದರೆ, ಪ್ರಶ್ನಿಸಿದರೆ ಮನಸೋ ಇಚ್ಛೆ ದೇಶದ್ರೋಹಿ ಪ್ರಕರಣ ದಾಖಲಿಸಲಾಗುತ್ತಿದೆ. ಈ ಬಗ್ಗೆಯೂ ಸದನದಲ್ಲಿ ಚರ್ಚೆ ಆಗಬೇಕಿದೆ ಎಂದ ಅವರು, ವಾಕ್ ಸ್ವಾತಂತ್ರ, ಪುರಭವನದ ಮುಂದೆ ಪ್ರತಿಭಟನೆಗೆ ಅವಕಾಶವಿಲ್ಲ ಎಂದರೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.







