ತೈಲ ಬೆಲೆ ಇಳಿಯುತ್ತಿದ್ದಂತೆಯೇ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

ಹೊಸದಿಲ್ಲಿ, ಮಾ.14: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತೀ ಲೀಟರ್‌ಗೆ 3 ರೂ.ಯಂತೆ ಕೇಂದ್ರ ಸರಕಾರ ಶನಿವಾರ ಹೆಚ್ಚಿಸಿದ್ದು ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ದರ ಇಳಿತದ ಲಾಭ ಗ್ರಾಹಕರಿಗೆ ದೊರಕದಂತಾಗಿದೆ.
ಈಗ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 22.98 ರೂ.ಗೆ, ಡೀಸೆಲ್ ಮೇಲಿನ ಸುಂಕ 18.83 ರೂ.ಗೆ ಹೆಚ್ಚಿದೆ. ಜೊತೆಗೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಸ್ತೆ ಉಪತೆರಿಗೆಯನ್ನು 1 ರೂ. ಹೆಚ್ಚಿಸಲಾಗಿದ್ದು, 10 ರೂ.ಗೆ ತಲುಪಿದೆ. ಈ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಕಚ್ಛಾತೈಲದ ಬೆಲೆ ಇಳಿಕೆಯಾದ ಸಂದರ್ಭ ಅದರ ಹೆಚ್ಚಿನ ಲಾಭ ಗ್ರಾಹಕರಿಗೆ ಸಂದಿದೆ. ಆದ್ದರಿಂದ, ಆರ್ಥಿಕ ಪರಿಸ್ಥಿತಿ ಬಿಗುವಾಗಿರುವ ಹಿನ್ನೆಲೆಯಲ್ಲಿ ಈ ಸಂದರ್ಭದ ಲಾಭವನ್ನು ಸರಕಾರ ಪಡೆಯಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
2014-15ರಲ್ಲೂ ಕಚ್ಛಾತೈಲದ ಬೆಲೆ ಇಳಿದ ಸಂದರ್ಭ ಸರಕಾರ ಇದೇ ರೀತಿಯ ಕ್ರಮ ಕೈಗೊಂಡಿತ್ತು. ಇದರಿಂದ ಸರಕಾರಕ್ಕೆ 39,000 ಹೆಚ್ಚುವರಿ ಆದಾಯ ಲಭಿಸಿದಂತಾಗಿದೆ. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಇಳಿಕೆಯಿಂದ ಆಗುವ ಲಾಭವನ್ನು ಪಡೆಯುವ ಉದ್ದೇಶದಿಂದ ನರೇಂದ್ರ ಮೋದಿ ಸರಕಾರ 2014ರ ನವೆಂಬರ್‌ನಿಂದ 2016ರ ಜನವರಿವರೆಗೆ ಅಬಕಾರಿ ಸುಂಕವನ್ನು 9 ಬಾರಿ ಹೆಚ್ಚಿಸಿದೆ. ಈ 15 ತಿಂಗಳಾವಧಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ 11.77 ರೂ, ಡೀಸೆಲ್ ಬೆಲೆಯಲ್ಲಿ 13.47 ರೂ. ಹೆಚ್ಚಳವಾಗಿದೆ. ಇದರಿಂದ 2014-15ರಲ್ಲಿ ಅಬಕಾರಿ ಸುಂಕದಿಂದ 99,000 ಕೋಟಿ ರೂ. ಸಂಗ್ರಹವಾಗಿದ್ದರೆ, 2016-17ರಲ್ಲಿ 2,42,000 ಕೋಟಿ ರೂ.ಗೆ ಹೆಚ್ಚಿದೆ. 2017ರ ಅಕ್ಟೋಬರ್‌ನಲ್ಲಿ ಅಬಕಾರಿ ಸುಂಕ 2 ರೂ ಕಡಿಮೆಯಾಗಿದ್ದರೆ 2018ರಲ್ಲಿ 1.50 ರೂ. ಕಡಿಮೆಯಾಗಿತ್ತು. ಆದರೆ 2019ರ ಜುಲೈಯಲ್ಲಿ ಪ್ರತೀ ಲೀಟರ್‌ಗೆ 3 ರೂ. ಹೆಚ್ಚಿಸಲಾಗಿತ್ತು.







