ಕೊರೋನ ವೈರಸ್ ಪೀಡಿತ ಇಟಲಿಗೆ ವೈದ್ಯಕೀಯ ಸಲಕರಣೆ ಸರಬರಾಜು ಮಾಡಿದ ಚೀನಾ

ರೋಮ್, ಮಾ.14: ಕೊರೋನ ವೈರಸ್ ಬಿಕ್ಕಟ್ಟಿನಿಂದ ತತ್ತರಿಸಿರುವ ಇಟಲಿಗೆ ಸಹಾಯ ಹಸ್ತ ಚಾಚಿರುವ ಚೀನಾ ದೇಶ ಮಾಸ್ಕ್‌ಗಳು ಹಾಗೂ ಶ್ವಾಸಯಂತ್ರಗಳ ಸಹಿತ ವೈದ್ಯಕೀಯ ಸಲಕರಣೆಗಳನ್ನು ತುಂಬಿರುವ ವಿಮಾನ, ವೈದ್ಯಕೀಯ ಸಿಬ್ಬಂದಿಯಿರುವ ತಂಡವನ್ನು ಇಟಲಿಗೆ ಕಳುಹಿಸಿಕೊಟ್ಟಿದೆ.
ಕಳೆದ ವರ್ಷಾಂತ್ಯದಲ್ಲಿ ಚೀನಾದಲ್ಲಿ ಮೊದಲ ಬಾರಿ ಕೊರೋನ ವೈರಸ್ ಕಾಣಿಸಿಕೊಂಡಿತ್ತು. ಆ ನಂತರ ಇದು ವಿಶ್ವದಾದ್ಯಂತ ಹಬ್ಬಿದೆ. ಚೀನಾದ ಬಳಿಕ ಇಟಲಿಯಲ್ಲಿ ಕೊರೋನ ವೈರಸ್‌ನಿಂದ ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇಟಲಿಯಲ್ಲಿ ಫೆ.21ರಂದು ಕೊರೋನ ವೈರಸ್ ಪ್ರಕರಣ ಬೆಳಕಿಗೆ ಬಂದ ಬಳಿಕ ಈ ತನಕ 1,016 ಜನರು ವೈರಸ್‌ಗೆ ಬಲಿಯಾಗಿದ್ದು, 15,112 ಜನರಲ್ಲಿ ಸೋಂಕು ತಗಲಿರುವುದು ದೃಢಪಟ್ಟಿದೆ.
ಚೀನಾದ ರೆಡ್ ಕ್ರಾಸ್ ಸಂಸ್ಥೆ ವ್ಯವಸ್ಥೆ ಮಾಡಿದ್ದ ವಿಮಾನದಲ್ಲಿ ಸುಮಾರು 30 ಟನ್‌ಗಳಷ್ಟ್ಟು ವೈದ್ಯಕೀಯ ಸಲಕರಣೆಗಳು ಹಾಗೂ 9 ಚೀನಾದ ವೈದ್ಯಕೀಯ ಸಿಬ್ಬಂದಿಯಿರುವ ತಂಡ ಗುರುವಾರ ಇಟಲಿಗೆ ಆಗಮಿಸಿದೆೆ.
‘‘ಬಹಳ ಒತ್ತಡದ, ಕಷ್ಟದ ಕ್ಷಣದಲ್ಲಿ ಕೆಲವು ವೈದ್ಯಕೀಯ ಸಲಕರಣೆ ನಮಗೆ ಲಭಿಸಿರುವುದಕ್ಕೆ ನಿರಾಳವಾಗಿದ್ದೇವೆ. ಇದು ತಾತ್ಕಾಲಿಕವಾಗಿ ಮಾತ್ರ ಸಹಾಯ ಮಾಡಲಿದೆ ಎಂಬುದು ನಿಜ. ಆದರೆ, ಇದು ಅತ್ಯಂತ ಮುಖ್ಯವಾಗಿದೆ. ನಮಗೆ ಇಂತಹ ಮಾಸ್ಕ್‌ಗಳ ಅಗತ್ಯವಿದೆ. ನಮಗೆ ಶ್ವಾಸಯಂತ್ರದ ಅಗತ್ಯವೂ ಇದೆ. ಇದು ನಮ್ಮ ದೇಶಕ್ಕೆ ನಿಜವಾಗಿಯೂ ಕೊಡುಗೆಯಾಗಿದೆ'' ಎಂದು ಇಟಲಿಯ ರೆಡ್ ಕ್ರಾಸ್‌ನ ಮುಖ್ಯಸ್ಥ ಫ್ರಾನ್ಸಿಸ್ಕೊ ರೊಕ್ಕೊ ಹೇಳಿದ್ದಾರೆ.







