ಕೊರೋನ ವೈರಸ್ ಎಫೆಕ್ಟ್: ಇಂಡಿಯಾ ಓಪನ್ ಸಹಿತ ಇತರ ಬ್ಯಾಡ್ಮಿಂಟನ್ ಟೂರ್ನಿಗಳು ಮುಂದೂಡಿಕೆ

ಹೈದರಾಬಾದ್, ಮಾ.14: ವರ್ಲ್ಡ್ ಟೂರ್ ಹಾಗೂ ಬಿಬ್ಲುಎಫ್ ಅನುಮೋದಿತ ಎಲ್ಲ ಬ್ಯಾಡ್ಮಿಂಟನ್ ಟೂರ್ನಿಗಳನ್ನು ಮಾ.16ರಿಂದ ಎಪ್ರಿಲ್ 12ರ ತನಕ ಮುಂದೂಡಲು ಬ್ಯಾಡ್ಮಿಂಟನ್ ಒಕ್ಕೂಟ(ಬಿಡಬ್ಲುಎಫ್)ನಿರ್ಧರಿಸಿದೆ. ಕೊರೋನ ವೈರಸ್ ಭೀತಿಯ ಕಾರಣಕ್ಕೆ ಈ ಹೆಜ್ಜೆ ಇಡಲಾಗಿದೆ.
‘‘ವಿಶ್ವ ಮಟ್ಟದಲ್ಲಿ ಕೊರೋನ ವೈರಸ್ ಭೀತಿ ಹುಟ್ಟಿಸಿರುವ ಹಿನ್ನಲೆಯಲ್ಲಿ ಪ್ರಯಾಣಕ್ಕೆ ಸಂಬಂಧಿಸಿ ಹಾಗೂ ಮನೆಯಲ್ಲಿ ಇರುವ ಕುರಿತಂತೆ ನಿರ್ಬಂಧನೆ ವಿಧಿಸಿರುವ ಕಾರಣಕ್ಕೆ ಆತಿಥ್ಯ ಸದಸ್ಯ ಸಂಸ್ಥೆಗಳು ಹಾಗೂ ಕಾಂಟೆನೆಂಟಲ್ ಕಾನ್ಫಡರೇಶನ್‌ಗಳನ್ನು ಸಂಪರ್ಕಿಸಿ ಎಲ್ಲ ಟೂರ್ನಿಗಳನ್ನು ರದ್ದುಪಡಿಸುವ ಅಥವಾ ಮುಂದೂಡುವ ಕುರಿತು ಚರ್ಚಿಸಲಾಗಿದೆ. ಬ್ಯಾಡ್ಮಿಂಟನ್ ಅಥ್ಲೀಟ್‌ಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸುವುದಕ್ಕೆ ಸಂಬಂಧಿಸಿ ತೀವ್ರ ಸಂಕೀರ್ಣತೆ ಎದುರಾಗಿದೆ’’ಎಂದು ಬಿಡಬ್ಲುಎಫ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಬಿಡಬ್ಲುಎಫ್‌ನ ಈ ನಿರ್ಧಾರದಿಂದಾಗಿ ಮುಂದಿನ ವಾರ ನಡೆಯಲಿರುವ ಸ್ವಿಸ್ ಓಪನ್, ಇಂಡಿಯಾ ಓಪನ್, ಒರ್ಲಿಯನ್ಸ್ ಮಾಸ್ಟರ್ಸ್, ಮಲೇಶ್ಯ ಓಪನ್ ಹಾಗೂ ಸಿಂಗಾಪುರ ಓಪನ್ ಹಾಗೂ ಹಲವು ಅಂತರ್‌ರಾಷ್ಟ್ರೀಯ ಗ್ರೇಡ್-3 ಟೂರ್ನಮೆಂಟ್‌ಗಳ ಮೇಲೆ ಪರಿಣಾಮಬೀರಿದೆ.
ರವಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ಆಲ್ ಇಂಗ್ಲೆಂಡ್ ಓಪನ್ ಟೂರ್ನಿಗೆ ತೆರೆ ಬಿದ್ದ ಬೆನ್ನಿಗೇ ಟೂರ್ನಿಗಳ ಅಮಾನತು ಕ್ರಮ ಜಾರಿಗೆ ಬರಲಿದೆ.
ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಭಾಗವಹಿಸಿದ್ದ ಎಲ್ಲ ಭಾರತೀಯ ಆಟಗಾರರು ಭಾರತಕ್ಕೆ ವಾಪಸಾಗಿದ್ದಾರೆ. ಕಿಡಂಬಿ ಶ್ರೀಕಾಂತ್ ಹಾಗೂ ಪುರುಷರ ಸಿಂಗಲ್ಸ್ ಕೋಚ್ ಪಾರ್ಕ್ ಸಾಂಗ್ ಶುಕ್ರವಾರವೇ ಭಾರತಕ್ಕೆ ಬಂದಿಳಿದಿದ್ದಾರೆ.







