ಕಾಸರಗೋಡು : 1.40 ಕೋಟಿ ರೂ. ಹವಾಲ ಹಣ ಪೊಲೀಸ್ ವಶ; ಇಬ್ಬರು ಸೆರೆ

ಕಾಸರಗೋಡು : ರೈಲಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 1.40 ಕೋಟಿ ರೂ. ಹವಾಲ ಹಣವನ್ನು ಕಾಸರಗೋಡು ರೈಲ್ವೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಸಾಂಗ್ಲಿಯ ಅಂಕುಷ್ (38), ಶಂಕರ್ (29) ಎಂಬವರನ್ನು ಬಂಧಿಸಲಾಗಿದ್ದು, ದೆಹಲಿ - ಎರ್ನಾಕುಲಂ ಎಕ್ಸ್ ಪ್ರೆಸ್ ರೈಲಿನಿಂದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕುಂಬಳೆಗೆ ರೈಲು ತಲಪಿದಾಗ ರೈಲಿನಲ್ಲಿ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾಗ ಸಂಶಯಯಾಸ್ಪದವಾಗಿ ಬ್ಯಾಗ್ ಗಳು ಕಂಡು ಬಂದಿತ್ತು. ಇದರಿಂದ ಸಂಶಯಗೊಂಡ ಸಿಬ್ಬಂದಿ ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ರೈಲು ಕಾಸರಗೋಡಿಗೆ ತಲಪಿದಾಗ ತಪಾಸಣೆ ನಡೆಸಿದರು. ಇಬ್ಬರನ್ನು ವಿಚಾರಿಸಿದಾಗ ಅಸ್ಪಷ್ಟ ಉತ್ತರ ನೀಡಿದರು. ಬಳಿಕ ಬ್ಯಾಗ್ ಗಳನ್ನು ತೆರೆದು ತಪಾಸಣೆ ನಡೆಸಿದಾಗ ಕಾಗದಗಳಲ್ಲಿ ಸುತ್ತಿಟ್ಟಿದ್ದ ಸ್ಥಿತಿಯಲ್ಲಿ ನೋಟುಗಳು ಪತ್ತೆಯಾಗಿವೆ.
ಇವರು ಮುಂಬೈಯಿಂದ ಎರ್ನಾಕುಲಂಗೆ ಟಿಕೆಟ್ ಪಡೆದಿದ್ದರು. ಎರಡು ಸಾವಿರ ಮುಖಬೆಲೆಯ 40ಲಕ್ಷ ರೂ., ಒಂದು ಕೋಟಿ ರೂ. ಗಳ ೫೦೦ರೂ. ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





