ಉಡುಪಿ: ಮೂವರು ಶಂಕಿತರಲ್ಲೂ ಕೊರೋನ ವೈರಸ್ ಇಲ್ಲ

ಉಡುಪಿ, ಮಾ.14: ಶಂಕಿತ ಕೊರೋನ ವೈರಸ್ ಸೋಂಕಿಗಾಗಿ ಮಣಿಪಾಲದ ಕೆಎಂಸಿ ಹಾಗೂ ಉಡುಪಿಯ ಜಿಲ್ಲಾಸ್ಪತ್ರೆಗಳಿಗೆ ದಾಖಲಾದ ಮೂವರಲ್ಲೂ ಕೊರೋನಾ ವೈರಸ್ ಪತ್ತೆಯಾಗಿಲ್ಲ ಎಂದು ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಶಿವಮೊಗ್ಗದ ಪ್ರಯೋಗಾಲಯಗಳಿಗೆ ಕಳುಹಿಸಲಾದ ಮೂವರು ಶಂಕಿತರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳು ಪರೀಕ್ಷೆಯ ವೇಳೆ ವೈರಸ್‌ಗೆ ನೆಗೆಟಿವ್ ಫಲಿತಾಂಶ ನೀಡಿವೆ ಎಂದು ಇಂದು ತನ್ನ ಕೈಸೇರಿದ ವರದಿಗಳು ತಿಳಿಸಿವೆ ಎಂದವರು ಹೇಳಿದರು.
ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ದುಬೈ ಮೂಲದ ಕೆಎಂಸಿ ವೈದ್ಯಕೀಯ ವಿದ್ಯಾರ್ಥಿ, ಜಿಲ್ಲಾಸ್ಪತ್ರೆಗೆ ಶುಕ್ರವಾರ ದಾಖಲಾಗಿದ್ದ ಶಿರ್ವದ 37ರ ಹರೆಯದ ಯುವಕ ಹಾಗೂ ಸಾಗರ ತಾಲೂಕು ಆನಂದಪುರದ 68 ವರ್ಷ ಪ್ರಾಯದ ಮಹಿಳೆಯಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿಲ್ಲ ಎಂದರು.
ಮಹಿಳೆಯ ಮಾದರಿಯನ್ನು ನಿನ್ನೆ ಮೂರನೇ ಬಾರಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಮೂರು ಸಲವೂ ನೆಗೆಟಿವ್ ವರದಿ ಬಂದಿವೆ ಎಂದು ಡಾ. ಸೂಡ ಮಾಹಿತಿ ನೀಡಿದರು.
ಕಾಪು ಯುವಕ
ಈ ನಡುವೆ ಇಂದು ಮತ್ತೊಬ್ಬ ಕೊರೋನ ಶಂಕಿತ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಜರ್ಮನಿಯಿಂದ ಬಂದಿರುವ ಕಾಪು ಮೂಲದ ಯುವಕ ಶೀತ, ಕೆಮ್ಮು ಬಾಧೆಗಾಗಿ ಜಿಲ್ಲಾಸ್ಪತ್ರೆಯನ್ನು ಖುದ್ದಾಗಿ ಸಂಪರ್ಕಿಸಿದ್ದು, ಪರೀಕ್ಷೆಗಾಗಿ ಆಗಮಿಸಿದ ಆತನನ್ನು ಇಲ್ಲಿ ವ್ಯವಸ್ಥೆಗೊಳಿಸಲಾಗಿರುವ ಪ್ರತ್ಯೇಕಿತ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಇದೀಗ ಈ ಯುವಕನ ಗಂಟಲಿನ ದ್ರವನ್ನು ಪರೀಕ್ಷೆಗಾಗಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.







