ಉಡುಪಿ: ಅನಿವಾಸಿ ಭಾರತೀಯನ ಸಾವು ಕೊರೋನ ವೈರಸ್ ಕಾರಣವಲ್ಲ; ಜಿಲ್ಲಾಧಿಕಾರಿ

ಉಡುಪಿ, ಮಾ.13: ಕಳೆದ ನವೆಂಬರ್ ತಿಂಗಳಿನಿಂದ ಇಲ್ಲಿಗೆ ಸಮೀಪದ ಹೂಡೆಯ ತೋನ್ಸೆ ಹೆಲ್ತ್ ಸೆಂಟರ್‌ನಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತಿದ್ದ ಕೆನಡಾದಿಂದ ಬಂದಿರುವ ಅನಿವಾಸಿ ಭಾರತೀಯರೊಬ್ಬರು ಹೃದಯಾಘಾತ ದಿಂದ ಇಂದು ಮೃತಪಟ್ಟಿದ್ದು, ಅವರ ಸಾವಿಗೆ ಕೊರೋನ ವೈರಸ್ ಕಾರಣವಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟ ಪಡಿಸಿದ್ದಾರೆ.
ಕೆನಡದಿಂದ ಬಂದಿರುವ ಅನಿವಾಸಿ ಭಾರತೀಯ ರಣವೀರ್ ಸಿಂಗ್, ವಿದೇಶಿ ಪ್ರಜೆ ಎಂಬ ಕಾರಣಕ್ಕೆ ಆತಂಕ ಸೃಷ್ಟಿಯಾಗಿದ್ದು, ಸಾವಿಗೆ ಕೊರೋನ ವೈರಸ್ ಕಾರಣವೆಂಬ ಗಾಸಿಪ್ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ ತೊಡಗಿತ್ತು.
ಕಳೆದ ನವೆಂಬರ್ 5ರಂದು ರಣವೀರ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರತಿ ಚಳಿಗಾಲದಲ್ಲಿ ಅವರು ಪಂಚಕರ್ಮ ಚಿಕಿತ್ಸೆ ಪಡೆಯುತಿದ್ದರು. ಇಂದು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ ಎಂದು ಜಿಲ್ಲಾಧಿಕಾರಿ ಹೇಳಿದರು.
ರಣವೀರ್ ಸಿಂಗ್ ಅವರ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮೃತ ವ್ಯಕ್ತಿಯಲ್ಲಿ ಕೊರೋನದ ಲಕ್ಷಣ ಕಂಡುಬಂದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಬೇಡ. ಸುಳ್ಳು ಸುದ್ದಿ ಪ್ರಚಾರ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.







