ಮನೆಯಿಂದ ಹೊರಬರಬೇಡಿ: ಕಲಬುರ್ಗಿ ಜಿಲ್ಲಾಧಿಕಾರಿ ಆದೇಶ
ಕೊರೋನವೈರಸ್ ಹಿನ್ನೆಲೆ

ಸಾಂದರ್ಭಿಕ ಚಿತ್ರ
ಕಲಬುರ್ಗಿ, ಮಾ.14: ವಯೋವೃದ್ಧರೊಬ್ಬರು ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ರೋಗ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದು, ತುರ್ತು ಕೆಲಸ ಹೊರತುಪಡಿಸಿ, ಯಾರೂ ಮನೆಯಿಂದ ಹೊರಬರಬಾರದು ಎಂದು ಕಲಬುರ್ಗಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರು ಸಾಧ್ಯವಾದಷ್ಟು ಮನೆಯಲ್ಲಿರುವುದು ಒಳಿತು. ಮನೆಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ತರಲು ಮನೆಯ ಓರ್ವ ಸದಸ್ಯರು ಹೋಗಿ ತೆಗೆದುಕೊಂಡು ಬರಲಿ. ಇತರರು ಅನಾವಶ್ಯಕವಾಗಿ ಹೊರಗಡೆ ಹೋಗುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.
ಪರೀಕ್ಷೆ, ಜನರ ಮೇಲೆ ನಿಗಾ: ಮೃತ ವ್ಯಕ್ತಿಯ ಕುಟುಂಬದ 45 ಮತ್ತು 39 ವರ್ಷದ ಇಬ್ಬರು ಮಹಿಳೆಯರು ಮತ್ತು 39 ವರ್ಷದ ಪುರುಷ ಹಾಗೂ 5 ವರ್ಷದ ಮಗು ಸೇರಿದಂತೆ ನಾಲ್ವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.
ಅದೇ ರೀತಿ, ಮೃತರೊಂದಿಗೆ ಸಂಪರ್ಕ ಹೊಂದಿದ್ದ 71 ಜನರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಇದೂವರೆಗೆ 4 ಜನರನ್ನು ಮಾತ್ರ ನಗರದ ಇಎಸ್ಐ ಆಸ್ಪತ್ರೆಯ ಐಸೋಲೇಶನ್ ವಾರ್ಡ್ನಲ್ಲಿ, ಉಳಿದಂತೆ 67 ಜನರನ್ನು ಹೋಮ್ ಐಸೋಲೇಷನ್ನಲ್ಲಿಟ್ಟು ನಿಗಾ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೊರೋನ ವೈರಸ್ ಕೇವಲ ಗಾಳಿಯಿಂದ ಹರಡುವ ರೋಗವಲ್ಲ, ಇದು ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಬರುವ ರೋಗವಾಗಿರುತ್ತದೆ. ವಿದೇಶದಿಂದ ಮರಳಿರುವ ವ್ಯಕ್ತಿ, ಆ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವ ಹಾಗೂ ಕೊರೋನ ವೈರಸ್ ಲಕ್ಷಣ ಹೊಂದಿರುವವರನ್ನು ಮಾತ್ರ ಕೊರೋನ ವೈರಸ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಅನುಮತಿ ಕಡ್ಡಾಯ: ಸಾರ್ವಜನಿಕರು ಅನಗತ್ಯವಾಗಿ ಪ್ರಯಾಣ ಮಾಡುವುದು ಮುಂದೂಡಬೇಕು. ಗುಂಪು ಗುಂಪಾಗಿ ಸೇರುವುದು, ಜನದಟ್ಟಣೆ ಪ್ರದೇಶದಲ್ಲಿ ಹೋಗುವುದನ್ನು ನಿಲ್ಲಿಸಬೇಕು. ಸಾಧ್ಯವಾದರೆ ಧಾರ್ಮಿಕ ಕಾರ್ಯಗಳನ್ನು ಮುಂದೂಡಬೇಕು. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಮದುವೆ-ಮುಂಜಿ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಮುನ್ನ ಜಿಲ್ಲಾಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿದರು.
ಪತ್ರಕರ್ತರಿಗೂ ತಟ್ಟಿದ ಕೊರೋನ ಬಿಸಿ
ಕೋವಿಡ್-19 ವೈರಸ್ ತಗುಲಿ ಸಾವನ್ನಪ್ಪಿದ್ದ ವೃದ್ಧರ ಪುತ್ರನೊಂದಿಗೆ ಸಂದರ್ಶನ ನಡೆಸಿದ್ದ ಇಬ್ಬರು ಪತ್ರಕರ್ತರು ಹಾಗೂ ಓರ್ವ ಕ್ಯಾಮರಾಮನ್ ಮೇಲೆ ನಿಗಾ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೇಳಿದರು.







