ಪರೀಕ್ಷೆ ಮುಂದೂಡುವುದಕ್ಕಾಗಿ ಪ್ರಶ್ನೆಪತ್ರಿಕೆ ಸೋರಿಕೆ ಎಂದು ಕಥೆ ಕಟ್ಟಿದ ವಿದ್ಯಾರ್ಥಿ ಡಿಬಾರ್

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.14: ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯನ್ನು ಮುಂದೂಡಲಿ ಎಂಬ ಉದ್ದೇಶದಿಂದ ಪಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಕಥೆ ಕಟ್ಟಿದ್ದು, ಆ ವಿದ್ಯಾರ್ಥಿಯನ್ನಿಂದು ಡಿಬಾರ್ ಮಾಡಲಾಗಿದೆ.
ಶುಕ್ರವಾರ ರಾತ್ರಿ ವಿದ್ಯಾರ್ಥಿಯೊಬ್ಬರ ಕಿಡಿಗೇಡಿತನದಿಂದ ಸ್ವಲ್ಪ ಮಟ್ಟಿಗೆ ಗಲಿಬಿಲಿಯಾದಂತಾಯಿತು ಎಂದು ಹೇಳಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ರಾತ್ರಿ ಪಿಯುಸಿ ಅಧಿಕಾರಿಯೊಬ್ಬರಿಗೆ ವ್ಯಕ್ತಿಯೊಬ್ಬ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ಇಂದು (ಶನಿವಾರ) ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯ ಕಂಪ್ಯೂಟರ್ ಸೈನ್ಸ್ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ. ಹೀಗಾಗಿ, ಬೇರೆ ಪ್ರಶ್ನೆಪತ್ರಿಕೆ ನೀಡಿ ಎಂದು ಹೇಳಿದ್ದನು ಎಂದು ತಿಳಿಸಿದ್ದಾರೆ.
ಆತನ ವಾಟ್ಸ್ ಆ್ಯಪ್ ಸಂದೇಶದ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡು, ಕಾರ್ಯಾಚರಣೆ ನಡೆಸಿದ ಬೆಂಗಳೂರು ಉತ್ತರ ಪೊಲೀಸರಿಗೆ ವಿವರ ಲಭ್ಯವಾಗಿದೆ. ಸಂದೇಶ ಕಳಿಸಿದ ವ್ಯಕ್ತಿಯು ವಿದ್ಯಾರ್ಥಿಯೊಬ್ಬರ ಮೊಬೈಲ್ ಸಂಖ್ಯೆಯಾಗಿದೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ, ನಾನು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದೇನೆ. ಆ ವಿಷಯವನ್ನು ಸರಿಯಾಗಿ ಓದಿಲ್ಲದಿದ್ದರಿಂದ ಪರೀಕ್ಷೆಗಳನ್ನು ಮುಂದೂಡಲಿ ಎಂಬ ಕಾರಣಕ್ಕೆ ಹೀಗೆ ಮಾಡಿದ್ದೇನೆ ಎಂದು ನಿಜವನ್ನು ಒಪ್ಪಿಕೊಂಡಿದ್ದ.
ವಿದ್ಯಾರ್ಥಿಯ ಹೇಳಿಕೆಯ ಆಧಾರದ ಮೇಲೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಆತನನ್ನು ಡಿಬಾರ್ ಮಾಡಲಾಗಿದೆ. ಈ ಸಂದೇಶ ಹೊರಗಡೆ ಎಲ್ಲಾದರೂ ರವಾನೆಯಾಗಿದ್ದರೆ, ಅದರಿಂದ ಆಗುತ್ತಿದ್ದ ಅನಾಹುತವನ್ನು ಊಹಿಸಲು ಸಾಧ್ಯವಿಲ್ಲ ಎಂದು ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.
ಪದವಿಪೂರ್ವ ಪರೀಕ್ಷಾ ಮಂಡಳಿಯ ನಿರ್ದೇಶಕಿ ಕನಗವಲ್ಲಿ ನೇತೃತ್ವದ ಮಂಡಳಿಯ ಅಧಿಕಾರಿಗಳು ಮತ್ತು ಡಿಸಿಪಿ ಶಶಿಕುಮಾರ್ ನೇತೃತ್ವದ ಬೆಂಗಳೂರು ಉತ್ತರ ಪೋಲಿಸರ ಜಂಟಿ ಕಾರ್ಯಾಚರಣೆಯಿಂದ ಈ ಅನಾಹುತ ತಪ್ಪಿದೆ. ಆ ಅಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಸಂದೇಶ ಕಳುಹಿಸಿದ್ದ ವಿದ್ಯಾರ್ಥಿ ಜಯನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಷಕರ ಸಮೇತವೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.







