ಕೂಳೂರು ಕಮಾನು ಸೇತುವೆ ದುರಸ್ತಿ ಹಿನ್ನೆಲೆ: ಮಾ.16ರಿಂದ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

ಮಂಗಳೂರು, ಮಾ.14: ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಕೂಳೂರು ಹಳೆ ಕಮಾನು ಸೇತುವೆಯ ಅಡಿಭಾಗದ ದುರಸ್ತಿ ಕಾಮಗಾರಿಯು ಆರಂಭಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶನದಂತೆ ಮೇಲ್ಭಾಗದ ಕಾಮಗಾರಿಯು ಮಾ.16ರಿಂದ ನಡೆಯಲಿದೆ. ಆ ಹಿನ್ನಲೆಯಲ್ಲಿ ಜಿಲ್ಲಾ ದಂಡಾಧಿಕಾರಿಯು ಹಳೆ ಕಮಾನು ಸೇತುವೆಯಲ್ಲಿ ಮಾ.16ರಿಂದ ಅನ್ವಯವಾಗುವಂತೆ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ.
ಸುಮಾರು 67 ವರ್ಷ ಹಳೆಯದಾದ ಈ ಸೇತುವೆಯ ಸಂಚಾರಕ್ಕೆ ಯೋಗ್ಯವಲ್ಲದ ಕಾರಣ ಲಘು ವಾಹನ ಹೊರತುಪಡಿಸಿ ಎಲ್ಲ ರೀತಿಯ ಘನ ವಾಹನಗಳನ್ನು ಈ ಸೇತುವೆಯಲ್ಲಿ ತಕ್ಷಣ ನಿಲ್ಲಿಸುವುದು ಸೂಕ್ತ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಹಿಂದೆಯೇ ಪತ್ರ ಬರೆದಿತ್ತು. ಹೊಸ ಸೇತುವೆ ನಿರ್ಮಾಣ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹಳೆ ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲು ನಿರ್ಧರಿಸಲಾಗಿದೆ.
ಸಂಭಾವ್ಯ ಬದಲಾವಣೆ: ಎನ್‌ಎಚ್‌ಎಐ ಅಧಿಕಾರಿಗಳು ಈಗಾಗಲೇ ನಗರದ ಸಂಚಾರಿ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸೇತುವೆ ಮೇಲ್ಭಾಗದ ಕಾಮಗಾರಿ ನಡೆಯುವ ಮಾ.16ರಿಂದ ಸಂಚಾರ ವ್ಯವಸ್ಥೆಯ ಬದಲಾವಣೆಯ ರೂಪುರೇಷೆ ಸಿದ್ಧಪಡಿಸಿದ್ದಾರೆ.
ಅದರಂತೆ ಕೂಳೂರು ಹೊಸ ಸೇತುವೆಯಲ್ಲೇ ವಾಹನಗಳ ದ್ವಿಮುಖ ಸಂಚಾರ (ಒಂದೇ ರಸ್ತೆಯಲ್ಲಿ ಎದುರು ಬದುರಾಗಿ) ನಡೆಯಲಿದೆ. ಉಡುಪಿ ಭಾಗದಿಂದ ಮಂಗಳೂರು ಕಡೆಗೆ ಸಂಚರಿಸುವ ಲಘು ವಾಹನ ಹಾಗೂ ನಿತ್ಯ ಸಂಚರಿಸುವ ಬಸ್‌ಗಳು ಮತ್ತು ಆರು ಚಕ್ರದ ಸರಕು ಸಾಗಾಟದ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಕಂಟೈನರ್, ಬುಲೆಟ್ ಟ್ಯಾಂಕರ್, ಕ್ರೇನ್, ಟ್ರೈಲರ್ಸ್ ಇತ್ಯಾದಿ ಘನ ವಾಹನಗಳ ಸಂಚಾರವನ್ನು ಈ ಮಾರ್ಗದಲ್ಲಿ ಪೂರ್ಣವಾಗಿ ನಿಷೇಧಿಸಲಾಗುತ್ತದೆ.
ಬೆಂಗಳೂರು ಕಡೆಗೆ ಚಲಿಸುವ ಘನ ವಾಹನಗಳು ಪಡುಬಿದ್ರಿಯಿಂದ ಕಾರ್ಕಳ ಮಾರ್ಗವಾಗಿ ಬೆಂಗಳೂರಿಗೆ ಚಲಿಸಬೇಕು. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಚಲಿಸುವ ಎಲ್ಲ ಘನ ವಾಹನಗಳು ಮೂಲ್ಕಿ- ಕಿನ್ನಿಗೋಳಿ- ಮೂಡುಬಿದಿರೆ ಮಾರ್ಗ ಹಾಗೂ ಹಳೆಯಂಗಡಿ ಕಡೆಯಿಂದ ಕಿನ್ನಿಗೋಳಿ- ಮೂಡುಬಿದಿರೆ-ಸುರತ್ಕಲ್-ಬಜ್ಪೆ ಮಾರ್ಗವಾಗಿ ಸೂಚಿಸಲಾಗಿದೆ.







