ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಕೊರೋನ ಸೋಕಿತ ಮಹಿಳೆಯ ಅಂತಿಮ ಸಂಸ್ಕಾರ

ಹೊಸದಿಲ್ಲಿ, ಮಾ. 14: ಕೊರೋನ ವೈರಸ್ ಸೋಂಕಿತರಾಗಿ ಮೃತಪಟ್ಟ ದಿಲ್ಲಿಯ 68 ವರ್ಷದ ಮಹಿಳೆಯ ಅಂತ್ಯ ಸಂಸ್ಕಾರವನ್ನು ವೈದ್ಯಕೀಯ ಅಧಿಕಾರಿಗಳ ಉಸ್ತುವಾರಿಯಲ್ಲಿ ನಿಗಮಬೋಧ್ ಘಾಟ್‌ನಲ್ಲಿರುವ ಸಿಎನ್‌ಜಿ ಚಿತಾಗಾರದಲ್ಲಿ ಶನಿವಾರ ನೆರವೇರಿಸಲಾಯಿತು.
ಪಾರ್ಥಿವ ಶರೀರದಿಂದ ಕೊರೋನ ಸೋಂಕು ಹರಡದೇ ಇರಲು ನಿರ್ದೇಶನಗಳನ್ನು ಕೋರಿ ಚಿತಾಗಾರದ ಸಿಬ್ಬಂದಿ ದಿಲ್ಲಿ ನಗರ ಸಭೆಯ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿನ ರಾಮ್ ಮನೋಹರ್ ಲೋಹಿಯಾ ಹಾಗೂ ಎಂಸಿಡಿಯ ವೈದ್ಯರು ಆಗಮಿಸಿ ಅಂತ್ಯಸಂಸ್ಕಾರಕ್ಕೆ ನಿರ್ದೇಶನ ನೀಡಿದರು.
ಚಿತಾಗಾರದ ಕಾರ್ಯಾಚರಣೆ ನಿರ್ವಹಿಸುತ್ತಿರುವ ನಿಗಮಬೋಧ್ ಘಾಟ್ ಸಂಚಲನ ಸಮಿತಿ ಮಹಿಳೆಯ ಅಂತಿಮ ಸಂಸ್ಕಾರ ನೆರವೇರಿಸಲು ಕೆಲವು ಗಂಟೆಗಳ ವಿಳಂಬ ಮಾಡಿತು. ಅಲ್ಲದೆ, ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶನಗಳನ್ನು ಕೋರಿ ನಗರಾಡಳಿತದ ಅಧಿಕಾರಿಗಳನ್ನು ಸಂಪರ್ಕಿಸಿತ್ತು. ‘‘ಜಗತ್ತಿನಾದ್ಯಂತ ಪರಿಸ್ಥಿತಿ ಅತಿ ಸೂಕ್ಷ್ಮವಾಗಿದೆ. ಆದುದರಿಂದ ನಾವು ದಿಲ್ಲಿ ನಗರ ಸಭೆ ಹಾಗೂ ವೈದ್ಯಕೀಯ ಅಧಿಕಾರಿಗಳ ಸೂಚನೆ ಕೋರಿದ್ದೆವು. ಸಿಎನ್‌ಜಿ ಬಳಸಿ ಅಂತ್ಯಸಂಸ್ಕಾರ ನಡೆಸಬೇಕು ಎಂದು ಅವರು ಹೇಳಿದ್ದರು ಹಾಗೂ ಅಧಿಕಾರಿಗಳು ಆಗಮಿಸಿ ಈ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಂಡರು’’ ಎಂದು ಸಮಿತಿಯ ಸುಮನ್ ಗುಪ್ತಾ ಹೇಳಿದ್ದಾರೆ







