ಉಡುಪಿ, ಮಣಿಪಾಲದಲ್ಲಿ ಚಿತ್ರಮಂದಿರ, ಮಾಲ್‌ಗಳು ಬಂದ್

ಉಡುಪಿ, ಮಾ.14: ಕೊರೋನ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನೀಡಿರುವ ಆದೇಶದಂತೆ ಉಡುಪಿ ಜಿಲ್ಲೆಯಲ್ಲಿರುವ ಸಿನೆಮಾ ಮಂದಿರಗಳು, ನಗರದಲ್ಲಿರುವ ಮಾಲ್‌ಗಳನ್ನು ಇಂದಿನಿಂದ ಬಂದ್ ಮಾಡಲಾಗಿದೆ.
ಉಡುಪಿ ನಗರದಲ್ಲಿರುವ ಅಲಂಕಾರ್, ಡಯಾನ, ಆಶೀರ್ವಾದ್ ಹಾಗೂ ಕಲ್ಪನಾ ಸಿನೆಮಾ ಮಂದಿರಗಳು ಮತ್ತು ಕುಂದಾಪುರದಲ್ಲಿರುವ ಒಂದು ಹಾಗೂ ಕಾರ್ಕಳದಲ್ಲಿರುವ ಎರಡು ಚಿತ್ರ ಮಂದಿರಗಳನ್ನು ಬಂದ್ ಮಾಡಲಾಗಿದೆ. ಅದೇ ರೀತಿ ಮಲ್ಟಿಫೆಕ್ಸ್‌ಗಳಾದ ಮಣಿಪಾಲದ ಐನಾಕ್ಸ್ ಮತ್ತು ಕೆನರಾ ಮಾಲ್ ನಲ್ಲಿರುವ ಭಾರತ್ ಸಿನೆಮಾ ಮಂದಿರವನ್ನು ಮುಚ್ಚಲಾಗಿದೆ.
ಬೆಳಗ್ಗೆಯಿಂದ ತೆರೆದಿದ್ದ ಸಿಟಿ ಸೆಂಟರ್ ಹಾಗೂ ಬಿಗ್ ಬಝಾರ್‌ಗಳನ್ನು ಬಳಿಕ ಅಧಿಕಾರಿಗಳ ಸೂಚನೆಯಂತೆ ಬೆಳಗ್ಗೆ 11ಗಂಟೆಯ ಬಳಿಕ ಬಂದ್ ಮಾಡಲಾಯಿತು. ಅದೇ ರೀತಿ ನಗರದ ಕೆಲವು ಬೃಹತ್ ಬಟ್ಟೆ ಮಳಿಗೆಗಳನ್ನು ಕೂಡ ಬಂದ್ ಮಾಡಲಾಗಿದೆ. ಆದರೆ ಚಿನ್ನಾಭರಣ ಮಳಿಗೆಗಳು ಸೇರಿದಂತೆ ಇತರ ಅಂಗಡಿಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದವು.
ಉಡುಪಿ ಶ್ರೀಕೃಷ್ಣ ಮಠ, ಮಲ್ಪೆ ಬೀಚ್ ಸೇರಿದಂತೆ ನಗರದಲ್ಲಿ ಜನರ ಹಾಗೂ ಪ್ರವಾಸಿಗರ ಸಂಖ್ಯೆ ಸಾಕಷ್ಟು ವಿರಳವಾಗಿತ್ತು. ಕುಂದಾಪುರದಲ್ಲಿ ಇಂದು ನಡೆದ ವಾರದ ಸಂತೆಯು ಜನರಿಲ್ಲದೆ ಬೀಕೋ ಎನ್ನುತ್ತಿತ್ತು. ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಮಣಿಪಾಲದ ಮಾಹೆ ಶಿಕ್ಷಣ ಸಂಸ್ಥೆಗಳಿಗೆ ಇಂದಿನಿಂದ ಮಾ.28ರವರೆಗೆ ರಜೆ ನೀಡಲಾಗಿದೆ. ವೀಕೆಂಡ್ ಆಗಿರುವ ಇಂದು ಮಣಿಪಾಲದ ಸಿನೆಮಾ ಮಂದಿರ ಹಾಗೂ ಮಾಲ್‌ಗಳ ವ್ಯಾಪಾರಕ್ಕೆ ಬಹಳ ದೊಡ್ಡ ಹೊಡೆತ ಬಿದ್ದಿದೆ ಎಂದು ದೂರಲಾಗುತ್ತಿದೆ.
ಕೊಲ್ಲೂರು ದೇವಳಕ್ಕೆ ಭೇಟಿ ನೀಡದಂತೆ ಮನವಿ
ಕೊರೋನ ವೈರಸ್ ಎಲ್ಲಡೆ ಹರಡುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲು ಇಚ್ಛಿಸುವ ಭಕ್ತರು ತಮ್ಮ ಪ್ರವಾಸವನ್ನು ಒಂದು ವಾರದ ಕಾಲ ಮುಂದೂಡಿ ಸಹಕರಿಸಬೇಕು ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಪೆರ್ಡೂರು ಶ್ರೀಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಸರಳ ರೀತಿಯಲ್ಲಿ ನಡೆಯಲಿದ್ದು, ಅಂಗಡಿ, ಮಳಿಗೆಗಳು, ನಾಟಕ, ಯಕ್ಷಗಾನ ಇತರ ಮನೋರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ಆದುದರಿಂದ ಭಕ್ತರು ಸಹಕರಿಸಬೇಕು ಎಂದು ದೇವಳದ ಆಡಳಿತಾಧಿಕಾರಿಯಾ ಗಿರುವ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








