ದ.ಕ. ಜಿಲ್ಲಾ ಪಿಯುಸಿಎಲ್ ಘಟಕ ವಜಾ: ಪಿಯುಸಿಎಲ್ ಆದೇಶ
ಮಂಗಳೂರು, ಮಾ.14: ದ.ಕ ಜಿಲ್ಲೆಯ ಪಿಯುಸಿಎಲ್ ಘಟಕದ ಎರಡು ಬಣಗಳ ನಡುವಿನ ಪರಸ್ಪರ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಪಿಯುಸಿಎಲ್ ಘಟಕವನ್ನು ಮುಂದಿನ ಆದೇಶದ ಬರುವವರೆಗೆ ತಾತ್ಕಾಲಿಕವಾಗಿ ವಜಾಗೊಳಿಸಿ ರುವುದಾಗಿ ಪಿಯುಸಿಎಲ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ವಿ.ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಆದೇಶದ ಹಿನ್ನೆಲೆಯಲ್ಲಿ ಮುಂದಿನ ಆದೇಶ ಬರುವವರೆಗೆ ಮಂಗಳೂರು ಕೇಂದ್ರವನ್ನು ಹೊಂದಿರುವ ದಕ್ಷಿಣ ಕನ್ನಡ ಮಾನವಹಕ್ಕುಗಳ ಸಂಘಟನೆ (ಪಿಯುಸಿಎಲ್ ಘಟಕ )ಯ ಹಾಲಿ ಅಧ್ಯಕ್ಷರಾಗಲಿ ಇತರ ಪದಾಧಿಕಾರಿಗಳಾಗಲಿ .ದ.ಕ .ಪಿಯುಸಿಎಲ್ ಹೆಸರಿನಲ್ಲಿ ಯಾವೂದೇ ಹೇಳಿಕೆಗಳನ್ನು ನೀಡಬಾರದು ಮತ್ತು ಯಾವೂದೇ ಕಾರ್ಯಕ್ರಮಗಳನ್ನು ಈ ಹೆಸರಿನಲ್ಲಿ ನಡೆಸುವ ಅಧಿಕಾರವನ್ನು ಹಾಲಿ ದ.ಕ ಜಿಲ್ಲಾ ಘಟಕ ಹೊಂದಿರುವುದಿಲ್ಲ ಎಂದು ಪಿಯುಸಿಎಲ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಪಿಯುಸಿಎಲ್ ಘಟಕ ತನ್ನ ಎಲ್ಲಾ ದಾಖಲೆಗಳನ್ನು ಪಿಯುಸಿಎಲ್ ರಾಜ್ಯ ಸಮಿತಿಗೆ ಹಸ್ತಾಂತರ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಸಾರ್ವಜನಿಕರ ಗಮನಕ್ಕೆ ಮಾಹಿತಿ ನೀಡುವ ಉದ್ದೇಶದಿಂದ ಪತ್ರಿಕಾ ಹೇಳಿಕೆ ನೀಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ಆದೇಶ ಬರುವವರೆಗೆ ದಕ್ಷಿಣ ಕನ್ನಡ ಪಿಯುಸಿಎಲ್‌ನ ಹಾಲಿ ಸದಸ್ಯರು ಮಾನವ ಹಕ್ಕುಗಳ ಸಂಘಟನೆಯ ತುರ್ತು ಕೆಲಸಗಳಿಗೆ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿ ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ದಕ್ಷಿಣ ಕನ್ನಡ ಪಿಯುಸಿಎಲ್ ಗೆ ಸಂಬಂಧಿಸಿದಂತೆ ಹಿರಿಯ ಸದಸ್ಯರಾಗಿದ್ದ ಪಿ.ಬಿ.ಡೇಸಾ ಮಾ.2ರಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ದಕ್ಷಿಣ ಕನ್ನಡ ಪಿಯುಸಿಎಲ್ ಘಟಕಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ತಾನು ನೂತನ ಸಮಿತಿಯ ಅಧ್ಯಕ್ಷನಾಗಿರುವುದಾಗಿ ಹಾಗೂ ಹೊಸ ಪದಾಧಿಕಾರಿಗಳ ನೇಮಕ ಮಾಡಿರುವುದಾಗಿ ತಿಳಿಸಿದ್ದರು.







