ಕೊರೋನಾ ಸೋಂಕು ಕುರಿತು ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಎಸಿ ಭರತ್ ಸ್ಪಷ್ಟನೆ
ಭಟ್ಕಳದಲ್ಲಿ ಕೊರೋನಾ ವೈರಸ್ ಪ್ರಕರಣ ದಾಖಲಾಗಿಲ್ಲ

ಭಟ್ಕಳ: ತಾಲ್ಲೂಕಿನಲ್ಲಿ ಕೊರೋನಾ ವೈರಸ್ ಕುರಿತು ಯಾವುದೇ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಕೆಲವರು ವಾಟ್ಸಪ್, ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ವದಂತಿ ಹಬ್ಬಿಸಿ ಜನರನ್ನು ಭಯಭೀತರನ್ನಾಗಿ ಮಾಡುತ್ತಿದ್ದು, ಅಂಥವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಭರತ್ ಎಸ್ ಹೇಳಿದರು.
ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೃದಯ ಚಿಕಿತ್ಸೆ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬರಿಗೆ ಜ್ವರ ಕಾಣಿಸಿದ್ದರಿಂದ ಅವರನ್ನು ವಿಶೇಷ ವಾರ್ಡಿನಲ್ಲಿಟ್ಟು ಚಿಕಿತ್ಸೆ ಕೊಡಿಸುತ್ತಿದ್ದೇವೆ. ಅವರ ರಕ್ತ, ಕಫವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೇ ತಪ್ಪಾಗಿ ತಿಳಿದುಕೊಂಡ ಕೆಲವರು ಕೊರೋನಾ ವೈರಸ್ ಎಂದು ವದಂತಿ ಹಬ್ಬಿಸುತ್ತಿದ್ದು, ಇಲ್ಲಿಯ ವರೆಗೆ ಯಾರಿಗೂ ಕೊರೋನ ವೈರಸ್ ಪತ್ತೆಯಾಗಿಲ್ಲ. ಸಾರ್ವಜನಿಕರು ಯಾವದೇ ವದಂತಿ ನಂಬಬಾರದು ಎಂದರು.
ಡಿವೈಎಸ್ಪಿ ಗೌತಮ್ ಕೆ ಸಿ ಮಾತನಾಡಿ, ಸಾಮಾಜಿಲ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವವರ ವಿರುದ್ದ ಮಾಹಿತಿ ಕಲೆ ಹಾಕಲಾಗುತ್ತಿದೆ. ವಿನಾಕಾರಣ ಸುಳ್ಳು ಸುದ್ದಿ, ವದಂತಿ ಹಬ್ಬಿಸಿ ಜನರಲ್ಲಿ ಭಯ ಹುಟ್ಟಿಸುವುದು ಸರಿಯಲ್ಲ. ವದಂತಿ ಹಬ್ಬಿಸುವ ಸುದ್ದಿಯನ್ನು ಪೋಸ್ಟ್ ಮಾಡಿದರೆ ಅಂತಹ ವಾಟ್ಸಪ್, ಫೇಸ್‍ಬುಕ್ ಎಡ್ಮಿನ್ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಸೀಲ್ದಾರ ವಿ ಪಿ ಕೊಟ್ರಳ್ಳಿ ಕೊರೋನಾ ವೈರಸ್ ಹರಡದಂತೆ ಸಾರ್ವಜನಿಕರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆ ತಿಳಿಸಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು. ತಾಲೂಕಾ ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ ಭಟ್ಟ ಅವರು ಮಾತನಾಡಿ ಪ್ರತಿಯೋರ್ವರೂ ಕೂಡಾ ಪ್ರತಿ ಎರಡು ಗಂಟೆಗೊಮ್ಮೆ ತಮ್ಮ ಕೈಗಳನ್ನು ಸ್ವಚ್ಚವಾಗಿ ಸೋಪಿನಿಂದ ತೊಳೆದು ಕೊಳ್ಳಬೇಕು. ಕನಿಷ್ಟ 30 ಸೆಕುಂಡ್‍ಗಳ ಕಾಲ ಕೈತೊಳೆಯಬೇಕು. ಯಾವುದೇ ವ್ಯಕ್ತಿಯಿಂದ ಕನಿಷ್ಟ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು ಎಂದ ಅವರು ಸಾಮೂಹಿಕವಾಗಿ ಯಾವುದೇ ಮಾಸ್ಕ ಬಳಸುವ ಅಗತ್ಯವಿಲ್ಲ, ಆದರೆ ಸಂಶಯಿತರು ಮಾತ್ರ ಮಾಸ್ಕ ಬಳಸಬೇಕು ಎಂದರು.
ಭಟ್ಕಳದಲ್ಲಿ ನಾಲ್ಕು ಮಂದಿಗೆ ಕರೋನಾ?: ಭಟ್ಕಳದಲ್ಲಿ 4ಮಂದಿಗೆ ಕರೋನಾ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿಯಾಗಿದ್ದು ಇಲ್ಲಿ ಯಾವುದೇ ಅಂತಹ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ನೂತನವಾಗಿ ಅಧಿಕಾರ ಸ್ವೀಕರಿಸಿಕೊಂಡಿರುವ ಭಟ್ಕಳ ಉಪವಿಭಾಗದ ಸಾಹಯಕ ಆಯುಕ್ತ ಎಸ್.ಭರತ್ ಸ್ಪಷ್ಠಿಕರಿಸಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮವೊಂದರಲ್ಲಿ ಭಟ್ಕಳದಲ್ಲಿ ನಾಲ್ಕು ಜನರಿಗೆ ವೈರಸ್ ಎಂಬ ಬ್ರೇಕಿಂಗ್ ಸುದ್ದಿಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಈ ಮೇಲಿನಂತೆ ಸ್ಪಷ್ಠೀಕರಣ ನೀಡಿದ್ದಾರೆ.







