ಹಂಪಿಗೆ ಒಂದು ವಾರ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ
ಕೊರೋನ ಸುಳ್ಳು ಸುದ್ದಿ ಹರಡಿಸಿದರೆ ಕ್ರಮ: ಜಿಲ್ಲಾಧಿಕಾರಿ ಎಚ್ಚರಿಕೆ
ಬಳ್ಳಾರಿ,ಮಾ.14: ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯಲ್ಲಿ ಪ್ರವಾಸಿಗರನ್ನು ಒಂದು ವಾರಗಳ ಕಾಲ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಮಾ.15 ಬೆಳಗ್ಗೆ 6 ರಿಂದ ಮಾ.22ರ ಬೆಳಗ್ಗೆ 6ರವರೆಗೆ ಒಂದು ವಾರಗಳ ಕಾಲ ಹಂಪಿಯಲ್ಲಿ ಯಾವುದೆ ಪ್ರವಾಸಿಗರಿಗೆ ಪ್ರವೇಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಕೊರೋನ ವೈರಸ್ ಭೀತಿಗೆ ಭಯಪಡಬೇಡಿ, ಬರಿ ಕೆಮ್ಮು ನೆಗಡಿ ಕಾಣಿಸಿಕೊಂಡರೆ ಅದು ರೋಗ ಬಂದಂತೆ ಅಲ್ಲ. ಅದಕ್ಕೆ ಯಾರು ಭಯ ಬೀಳುವ ಅವಶ್ಯಕತೆಯಿಲ್ಲ. ಸಂಭಾವಿತ ಕೊರೋನ ವೈರಸ್ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆಯು ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೋಂಕುಪೀಡಿತರ ಸಂಪರ್ಕದಿಂದ ದೂರವಿರಬೇಕು. ಶಂಕಿತ ರೋಗಿಯು ಮನೆಯಲ್ಲಿಯೆ ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್ ಲೇಯರ್ ಮಾಸ್ಕ್ ಬಳಸಬೇಕು ಎಂದರು.
ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಅಥವಾ ಕರವಸ್ತ್ರ ಉಪಯೋಗಿಸಬೇಕು. ಸೋಂಕಿತ ದೇಶಗಳಿಗೆ ಮತ್ತು ತುರ್ತು ಅಗತ್ಯವಿಲ್ಲದ ಪ್ರಯಾಣಗಳನ್ನು ರದ್ದುಗೊಳಿಸುವಂತೆ ಅವರು ಮನವಿ ಮಾಡಿದರು.
ಜಿಲ್ಲಗೆ ಆಗಮಿಸುವ ಎಲ್ಲ ವೀದೇಶಿಯರು ಹಾಗೂ ಭಾರತೀಯರಲ್ಲಿ ರೋಗದ ಲಕ್ಷಣಗಳು ಇಲ್ಲದಿದ್ದರೂ ಸಹ ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಬೇಕು. ಜಿಲ್ಲೆಯಲ್ಲಿ ಇದುವರೆಗೆ 10ಜನ ಶಂಕಿತರು ಎಂದು ದಾಖಲಾಗಿದೆ. ಅದರಲ್ಲಿ 3ಜನಕ್ಕೆ ನೆಗಟಿವ್ ಎಂದು ಬಂದಿದೆ ಎಂದು ನಕುಲ್ ತಿಳಿಸಿದರು.
ಜಿಲ್ಲೆಯಲ್ಲಿ ಕೊರೋನ ರೋಗಕ್ಕೆ ಸಂಬಂಧಪಟ್ಟಂತೆ ಸುಳ್ಳು ಸುದ್ದಿಗಳು, ತಪ್ಪುಮಾಹಿತಿಗಳನ್ನು ಹಾಗೂ ಈ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಯಾರಾದರು ಸುಳ್ಳು ಸುದ್ದಿಗಳನ್ನು ಹರಡಿಸಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿ 10 ಹಾಸಿಗೆಯುಳ್ಳ ಐಸೋಲೇಷನ್ ವಾರ್ಡ್‌ನ ವ್ಯವಸ್ಥೆ ಮಾಡಲಾಗಿದೆ. ಹೊಸಪೇಟೆ ತಾಲೂಕಿನ ಆಸ್ಪತ್ರೆಯಲ್ಲಿ 3 ಹಾಸಿಗೆಯುಳ್ಳ ಮತ್ತು ಉಳಿದ ತಾಲೂಕು ಆಸ್ಪತ್ರೆಗಳಲ್ಲಿ 2 ಹಾಸಿಗೆಯುಳ್ಳ ಐಸೋಲೇಷನ್ ವಾರ್ಡ್ ವ್ಯವಸ್ಥೆ ಮಾಡಲಾಗಿದೆ ಎಂದು ನಕುಲ್ ತಿಳಿಸಿದರು.
ಈ ರೋಗಕ್ಕೆ ಸಂಬಂಧಿಸಿದಂತೆ ಯಾವುದೆ ಸಂದೇಹವಿದ್ದಲ್ಲಿ ರಾಜ್ಯದ ಸಹಾಯವಾಣಿ ಸಂಖ್ಯೆ 104 ಹಾಗೂ ಜಿಲ್ಲೆಯಲ್ಲಿ ದೂ.ಸಂ.08392-277100ಗೆ ಮಾಹಿತಿಗಳನ್ನು ದಿನದ 24/7 ಗಂಟೆಯವರೆಗೂ ಪಡೆಯಬಹುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಜನಾರ್ದನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







