ಬೆಂಗಳೂರು: ಹಣ್ಣು-ತರಕಾರಿ ಮಾರಾಟ ಕುಸಿತ
ಬೆಂಗಳೂರು, ಮಾ.14: ಸಿಲಿಕಾನ್ ಸಿಟಿಯಲ್ಲಿ ಕೊರೋನ ಭೀತಿಯ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹಣ್ಣು, ತರಕಾರಿಗಳ ಮಾರಾಟ ಕುಸಿತವಾಗಿದ್ದು, ದರಗಳಲ್ಲಿಯೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಯಶವಂತಪುರ, ಕೆ.ಆರ್.ಮಾರುಕಟ್ಟೆ, ವಿಜಯನಗರ, ಮಲ್ಲೇಶ್ವರ, ಶಿವಾಜಿನಗರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಜನರಿಲ್ಲದಿದ್ದರಿಂದ ಮಾರಾಟ ಕಡಿಮೆಯಾಗಿದೆ. ಇನ್ನು ಸರಕಾರ ಮದುವೆಗಳು, ಸಮಾವೇಶಗಳಿಗೆ ನಿಷೇಧ ಹೇರಿರುವುದರ ನೇರ ಪರಿಣಾಮ ಮಾರುಕಟ್ಟೆ ಮೇಲೆ ಬಿದ್ದಿದೆ.
ಸರಕಾರದ ನಿರ್ಧಾರದಿಂದ ಟೊಮೊಟೊ, ಹಸಿ ಮೆಣಸಿನಕಾಯಿ, ಕ್ಯಾರೆಟ್, ಈರುಳ್ಳಿ, ಆಲೂಗಡ್ಡೆ, ಅವರೇಕಾಯಿ ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಶೇ. 20ರಷ್ಟು ಬೆಲೆ ಕುಸಿದಿದ್ದು ಸಗಟು ವ್ಯಾಪಾರಸ್ಥರು, ರೈತರು ಕಂಗಾಲಾಗಿದ್ದಾರೆ.
ಸಾಮಾನ್ಯವಾಗಿ ಮಾರ್ಚ್ ಹಾಗೂ ಎಪ್ರಿಲ್ ಎರಡೂ ತಿಂಗಳುಗಳು ಅತಿಹೆಚ್ಚು ಮದುವೆ ಸಮಾರಂಭಗಳು ನಡೆಯುತ್ತವೆ. ಹೀಗಾಗಿ, ಈ ಸಮಯದಲ್ಲಿ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಸಾಕಷ್ಟು ವಹಿವಾಟು ನಡೆಯುತ್ತದೆ. ಬೇರೆ ಬೇರೆಗಳಿಂದ ರಫ್ತು ಮತ್ತು ಆಮದು ನಡೆಯುತ್ತದೆ. ಆದರೆ, ಈ ಕೊರೋನ ಭೀತಿಯಿಂದ ಆಡಂಬರ ಮದುವೆಗಳಿಗೆ ಬ್ರೇಕ್ ಬಿದ್ದಿದ್ದು, ದರ ಕುಸಿತಕ್ಕೂ ಕಾರಣವಾಗಿದೆ.
ಮಾಸ್ಕ್ ಬಳಸದ ವ್ಯಾಪಾರಸ್ಥರು: ಮಾರುಕಟ್ಟೆ ಸಾರ್ವಜನಿಕ ಸ್ಥಳವಾಗಿದ್ದು, ಸಾವಿರಾರು ಜನರು ಓಡಾಡಿ ತರಕಾರಿ, ಹಣ್ಣು ಕೊಂಡೊಯ್ಯುತ್ತಾರೆ. ಪ್ರತಿಯೊಬ್ಬರು ಮಾಸ್ಕ್ ಸೇರಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರ ಎಚ್ಚರಿಕೆಯನ್ನು ನೀಡಿದ್ದರೂ, ಯಾರೂ ಸಹ ಈ ಕುರಿತು ಗಂಭೀರವಾಗಿ ಪರಿಗಣಿಸಿಲ್ಲ.
ಯಾವ ತರಕಾರಿಗೆ ಎಷ್ಟು ಬೆಲೆ?
ತರಕಾರಿ ಬೆಲೆ (ಕೆ.ಜಿ)
ಹಸಿಮೆಣಸಿನಕಾಯಿ 20-25ರೂ.
ಈರುಳ್ಳಿ 40 -50ರೂ.
ಟೊಮೊಟೊ 10-15ರೂ.
ಕ್ಯಾರೆಟ್ 20-30ರೂ.
ಅವರೇಕಾಯಿ 30-40ರೂ.
ಅಲಸಂದಿಕಾಯಿ 30-35ರೂ.
ಬೀನ್ಸ್ 30-40ರೂ.
ಯಾವ ಹಣ್ಣಿಗೆ ಎಷ್ಟು ಬೆಲೆ?
ಹಣ್ಣುಗಳು ಬೆಲೆ (ಕೆ.ಜಿ)
ಸೇಬು 80-100
ದಾಳಿಂಬೆ 120-140
ಸಪೋಟ 40-50
ದ್ರಾಕ್ಷಿ 70-80
ಕಿತ್ತಾಳೆ 50-60
ಮೊಸಂಬಿ 70-80







