‘ಏತ ನೀರಾವರಿ ಯೋಜನೆ’ ಐದು ಸಾವಿರ ಕೋಟಿ ರೂ.ಅನುದಾನ: ರಮೇಶ್ ಜಾರಕಿಹೊಳಿ

ಕೊಪ್ಪಳ, ಮಾ.14: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರವು ರೈತ ಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಏತ ನೀರಾವರಿ ಯೋಜನೆಯಡಿ ಸುಮಾರು ಐದು ಸಾವಿರ ಕೋಟಿ ರೂ.ಗಳ ಅನುದಾನವನ್ನು ಒದಗಿಸಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಶನಿವಾರ ಮುನಿರಾಬಾದ್ ಕಾಡಾ ಕಚೇರಿಯಲ್ಲಿ ತುಂಗಭದ್ರಾ ಅಣೆಟ್ಟಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಡದಂಡೆ ಮತ್ತು ಬಲ ದಂಡೆ ಕಾಲುವೆಗಳ ವ್ಯಾಪ್ತಿಯ ರೈತರ ಎರಡನೆ ಬೆಳೆಗೆ 113ನೆ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ರಾಜ್ಯ ಮಟ್ಟದ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತುಂಗಭದ್ರಾ ಅಣೆಕಟ್ಟೆಯ ಅಭಿವೃದ್ಧಿಗಾಗಿ ಅಂತರ್ ರಾಜ್ಯ ವ್ಯಾಪ್ತಿಯ ವಿಷಯಗಳ ಬಗ್ಗೆಯೂ ಇಂದು ಸಭೆಯಲ್ಲಿ ಚರ್ಚಿಸಲಾಗಿದ್ದು, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಎಡದಂಡೆ ಕಾಲುವೆ ಸ್ಥಿತಿ-ಗತಿ ಬಗ್ಗೆ ವರದಿ ಸಲ್ಲಿಸುವಂತೆ ಸಿಇಓಗಳಿಗೆ ಸೂಚನೆ ನೀಡಲಾಗಿದೆ. ರೈತರಿಗೆ ಅನುಕೂಲವಾಗು ನಿಟ್ಟಿನಲ್ಲಿ ಹಾಗೂ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಮೂರು ಜಿಲ್ಲೆಗಳ ಜನ-ಜನುವಾರುಗಳಿಗೆ ತುಂಗಭದ್ರಾ ಜಲಾಶಯದ ನೀರನ್ನು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಜಲಾಶಯದಲ್ಲಿ ಇದ್ದ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎರಡನೆ ಬೆಳೆಗೆ ಎಷ್ಟು ಪ್ರದೇಶಗಳಿಗೆ ನೀರನ್ನು ಕೊಡುವುದಕ್ಕೆ ಸಾಧ್ಯ ಇದೆ ಎಂಬುದರ ಬಗ್ಗೆ ಚರ್ಚಿಸಿ, ಎರಡನೆ ಬೆಳೆಗೆ ನೀರನ್ನು ಬಿಡಲು ಅನುಕೂಲ ಮಾಡಿಕೊಡಲಾಗುವುದು. ನಮ್ಮ ಉದ್ದೇಶ ಈ ಭಾಗದಲ್ಲಿರುವ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವುದೆ ರೀತಿ ತೊಂದರೆಯಾಗಬಾರದು ಮತ್ತು ನೀರು ಪೋಲಾಗಬಾರದು ಎಂಬುುದಾಗಿದೆ ಎಂದು ಅವರು ಹೇಳಿದರು.
ತುಂಗಭದ್ರಾ ಜಲಾಶಯಕ್ಕೆ ನವಲಿ ಗ್ರಾಮದಲ್ಲಿ ಸಮತೋಲನ ಜಲಾಶಯ ನಿರ್ಮಾಣ ಕುರಿತಂತೆ ಈ ಭಾಗದ ಶಾಸಕರು ನನ್ನನ್ನು ಭೇಟಿ ಮಾಡಿದ್ದಾರೆ. ಅಧಿಕಾರಿಗಳು ಈಗಾಗಲೆ ಪರಿಶೀಲನೆ ನಡೆಸಿದ್ದಾರೆ. ಇಂದು ಸಮತೋಲನ ಜಲಾಶಯದ ಸ್ಥಳ ಪರಿವೀಕ್ಷಣೆ ಮಾಡಿ ಎಲ್ಲವನ್ನೂ ಸರಿಪಡಿಸಿ ಆದಷ್ಟು ಬೇಗನೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಿ ರೈತರಿಗೆ ಅರ್ಪಿಸಲಾಗುತ್ತದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ತುಂಗಭದ್ರಾ ಜಲಾಶಯದಿಂದ ಕೈಗಾರಿಕೆಗಳು ನೀರು ಕದಿಯುತ್ತಿರುವ ಕುರಿತಂತೆ ಪರಿಶೀಲನೆ ನಡೆಸಲಾಗುವುದು. ರೈತರೂ ಉಳಿಯಬೇಕು, ಕಾರ್ಖಾನೆಗಳು ಉಳಿಯಬೇಕು. ಈ ನಿಟ್ಟಿನಲ್ಲಿ ನಮ್ಮ ಸರಕಾರವು ಸೂಕ್ತ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಬಳ್ಳಾರಿ ಸಂಸದ ದೇವೆಂದ್ರಪ್ಪ, ಮುನಿರಾಬಾದ್ ಕಾಡಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ ತುರುವಿಹಾಳ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್.ವಿಶ್ವನಾಥ ರೆಡ್ಡಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ವೆಂಕಟರಾವ್ ನಾಡಗೌಡ, ಗಣೇಶ್ ಸೇರಿದಂತೆ ಮುನಿರಾಬಾದ್ ಕಾಡಾ ಟಿ.ಬಿ.ಪಿ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊರೊನಾ ಬಗ್ಗೆ ಜಾಗೃತರಾಗಿರುವಂತೆ ಮುಖ್ಯಮಂತ್ರಿ ಈಗಾಗಲೆ ಜನರಿಗೆ ಮನವಿ ಮಾಡಿದ್ದಾರೆ. ಅದರಂತೆ ಜನರು ಜಾಗೃತರಾಗಿರುವಂತೆ ನಾನೂ ಮನವಿ ಮಾಡುತ್ತೇನೆ. ಕೊರೊನಾ ಯಾವುದೆ ಜಾತಿ ನೋಡಿ ಬರಲ್ಲ. ಈ ವೈರಸ್ ಅನ್ನು ಎಲ್ಲರೂ ಕೂಡಿ ನಿವಾರಿಸಬೇಕಿದೆ. ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ನಮ್ಮ ಸರಕಾರವು ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ವಾರದ ಬಳಿಕ ಎಲ್ಲ ವ್ಯಾಪಾರ ವಹಿವಾಟು ಸುಗಮವಾಗಲಿದೆ.
-ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ







