ಕೊರೋನಾ ವೈರಸ್ ಭೀತಿ: ಕೊಡಗಿನ ಪ್ರವಾಸಿ ತಾಣಗಳು ಖಾಲಿ ಖಾಲಿ
ಪ್ರವಾಸೋದ್ಯಮಕ್ಕೆ ನಷ್ಟ

ಮಡಿಕೇರಿ,ಮಾ.14: ಕೊರೋನಾ ವೈರಸ್ ಹರಡುತ್ತಿರುವ ಕುರಿತು ಜನಜಾಗೃತಿ ಪ್ರಚಾರ ಕಾರ್ಯಗಳು ನಡೆದ ಪರಿಣಾಮ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಕಾಣುತಿದ್ದ ಕೊಡಗು ಜಿಲ್ಲೆ ಖಾಲಿ ಖಾಲಿಯಾಗಿದೆ. ಜಿಲ್ಲೆಯ ಬಹುತೇಕ ಪ್ರವಾಸಿ ಕೇಂದ್ರಗಳು ಕಳೆದೊಂದು ವಾರದಿಂದ ಪ್ರವಾಸಿಗರಿಲ್ಲದೆ ಭಣಗುಡುತ್ತಿವೆ. ಜೊತೆಗೆ ಹೊಟೇಲ್, ಹೋಂಸ್ಟೇ, ರೆಸಾರ್ಟ್‍ಗಳು ಕೂಡಾ ಪ್ರವಾಸಿಗರಿಲ್ಲದೆ ನಷ್ಟದ ಹಾದಿ ಹಿಡಿದಿವೆ.
ಈ ಮೊದಲೇ ಪ್ರವಾಸ ನಿಗದಿಪಡಿಸಿದ್ದ ಪ್ರವಾಸಿಗರು ಕೂಡಾ ತಮ್ಮ ಪ್ರವಾಸವನ್ನು ಮೊಟಕುಗೊಳಿದ್ದು, ಇದರಿಂದಾಗಿ ಪ್ರವಾಸಿ ಕೇಂದ್ರಗಳಲ್ಲಿ ವ್ಯಾಪಾರ ನಡೆಸುತ್ತಿದ್ದ ಸಣ್ಣ ವ್ಯಾಪಾರಿಗಳು ಕೂಡಾ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಪರೂಪಕ್ಕೆ ಪ್ರವಾಸಿಗರು ಬಂದರೂ, ರಸ್ತೆ ಬದಿಯ ವ್ಯಾಪಾರಿಗಳಿಂದ ಆಹಾರ ವಸ್ತುಗಳನ್ನು ಖರೀದಿಸಲು ಹಿಂಜರಿಯುತ್ತಿದ್ದು, ಪರಿಣಾಮವಾಗಿ ನಗರದ ರಾಜಾಸೀಟ್ ಬಳಿ ವ್ಯಾಪಾರ ನಡೆಸುತ್ತಿದ್ದ ಹತ್ತಾರು ಮಂದಿ ವ್ಯಾಪಾರಿಗಳು ತಮ್ಮ ವಹಿವಾಟು ಸ್ಥಗಿತಗೊಳಿಸಿದ್ದಾರೆ.
ವಾರಾಂತ್ಯದಲ್ಲಿ ಗಿಜಿಗುಡುತ್ತಿದ್ದ ನಗರದ ರಾಜಾಸೀಟ್, ಮಾಂದಲಪಟ್ಟಿ, ಅಬ್ಬಿಫಾಲ್ಸ್, ದುಬಾರೆ, ಕಾವೇರಿ ನಿಸರ್ಗಧಾಮ ಮುಂತಾದ ಪ್ರೇಕ್ಷಣೀಯ ಸ್ಥಳಗಳು ಶನಿವಾರ ಪ್ರವಾಸಿಗರಿಲ್ಲದೆ ಭಣಗುಡುತ್ತಿದ್ದುದು ಗೋಚರಿಸಿದೆ.
ಶನಿವಾರ ಮುಂಜಾನೆ ನಗರದ ಪ್ರವಾಸಿತಾಣ ರಾಜಾಸೀಟ್ ಪ್ರವಾಸಿಗರಿಗೆ ತೆರೆದಿತ್ತಾದರೂ, ಮಧ್ಯಾಹ್ನದ ವೇಳೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ರಾಜಾಸೀಟು, ಅಬ್ಬಿ ಜಲಪಾತ, ಮಾಂದಲಪಟ್ಟಿ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳನ್ನು ಒಂದು ವಾರಗಳ ಕಾಲ ಮುಚ್ಚುವಂತೆ ಆದೇಶ ಹೊರಡಿಸಿದರು. ನಂತರ ಪ್ರವಾಸಿತಾಣಗಳು ಮುಚಲ್ಪಟ್ಟವು.
ರಾಜಾಸೀಟ್‍ನ ಪ್ರವೇಶದ್ವಾರದಲ್ಲಿ ‘ಕೊರೋನಾ ವೈರಸ್-ಭಯಬೇಡ, ಎಚ್ಚರವಿರಲಿ’ ಎಂಬ ಸಂದೇಶ ಸಾರುವ ಹಾಗೂ ವೈರಸ್ ಹರಡದಂತೆ ವಹಿಸಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸುವ ಫಲಕವನ್ನು ಪ್ರದರ್ಶಿಸಲಾಗಿದೆ.
ಈ ನಡುವೆ ರಾಜ್ಯ ಸರಕಾರ ಶುಕ್ರವಾರ ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ಪ್ರವಾಸಿತಾಣಗಳಾದ ಕಾವೇರಿ ನಿಸರ್ಗಧಾಮ ಹಾಗೂ ದುಬಾರೆ ಆನೆ ಶಿಬಿರಕ್ಕೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು ಆದೇಶ ಹೊರಡಿಸಿದ್ದಾರೆ.
ಸಂತೆಗಳೂ ರದ್ದು
ಸರಕಾರದ ಆದೇಶ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಜಾತ್ರೆ, ಉತ್ಸವಗಳು ಹಾಗೂ ಸಂತೆಯನ್ನೂ ರದ್ದುಗೊಳಿಸಲಾಗಿದೆ. ಕೋರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವ ಸಲುವಾಗಿ ಸುಂಟಿಕೊಪ್ಪದಲ್ಲಿ ಭಾನುವಾರ (ತಾ.15) ನಡೆಯಬೇಕಾಗಿದ್ದ ಸಂತೆಯನ್ನು ರದ್ದುಪಡಿಸಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.










