ಕೊರೋನವೈರಸ್: ಮೃತರ ಕುಟುಂಬಕ್ಕೆ ಘೋಷಿಸಿದ್ದ 4 ಲಕ್ಷ ರೂ. ಪರಿಹಾರ ಹಿಂದೆಗೆದ ಕೇಂದ್ರ ಸರಕಾರ

ಫೈಲ್ ಚಿತ್ರ
ಹೊಸದಿಲ್ಲಿ,ಮಾ. 14: ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟವರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಶನಿವಾರ ಘೋಷಿಸಿದ ಒಂದು ಗಂಟೆಗಳ ಬಳಿಕ ಯು ಟರ್ನ್ ತೆಗೆದುಕೊಂಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ ಘೋಷಣೆಯನ್ನು ಹಿಂದೆ ತೆಗೆದುಕೊಂಡಿದೆ.
ಇದಕ್ಕಿಂತ ಮೊದಲು ದೇಶದಲ್ಲಿ ಕೊರೋನವೈರಸ್ ಪಿಡುಗನ್ನು ‘ಅಧಿಸೂಚಿತ ವಿಪತ್ತು ’ಎಂದು ಘೋಷಿಸಿರುವ ಕೇಂದ್ರ ಸರಕಾರ ಇದು ಸೋಂಕುಪೀಡಿತ ವ್ಯಕ್ತಿಗಳಿಗೆ ಮತ್ತು ಸೋಂಕಿನಿಂದಾಗಿ ಮೃತರ ಕುಟುಂಬಗಳಿಗೆ ಪರಿಹಾರ ಮತ್ತು ನೆರವನ್ನು ಒದಗಿಸುವ ‘ವಿಶೇಷ ಒಂದು ಬಾರಿಯ ವ್ಯವಸ್ಥೆ ’ಯಾಗಿದೆ ಎಂದು ತಿಳಿಸಿತ್ತು. ಕೊರೋನವೈರಸ್ ಸೋಂಕಿನಿಂದ ಮೃತರ ಕುಟುಂಬಗಳಿಗೆ ನಾಲ್ಕು ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು. ಚಿಕಿತ್ಸೆ ಪಡೆಯುತ್ತಿರುವ ಸೋಂಕುಪೀಡಿತರ ಆಸ್ಪತ್ರೆ ವೆಚ್ಚವನ್ನು ರಾಜ್ಯ ಸರಕಾರಗಳು ನಿಗದಿಗೊಳಿಸಿವೆ ಎಂದು ಗೃಹ ಸಚಿವಾಲಯವು ತನ್ನ ಪತ್ರದಲ್ಲಿ ತಿಳಿಸಿತ್ತು. ಆದರೆ, ಒಂದು ಗಂಟೆಗಳ ಬಳಿಕ ಬಿಡುಗಡೆ ಮಾಡಲಾದ ಪರಿಷ್ಕೃತ ಅಧಿಸೂಚನೆಯಲ್ಲಿ ಪ್ರತ್ಯೇಕ ನಿಗಾ ಕ್ರಮಗಳು, ಮಾದರಿ ಸಂಗ್ರಹ ಹಾಗೂ ಪರೀಕ್ಷೆಗೆ ಹಣಕಾಸಿನ ನೆರವು ನೀಡಲಾಗುವುದು ಎಂದು ಮಾತ್ರ ಹೇಳಲಾಗಿದೆ. ಅಗತ್ಯದ ಉಪಕರಣಗಳು ಹಾಗೂ ಪ್ರಯೋಗಾಲಯಗಳನ್ನು ಹೊಂದುವುದು ರಾಜ್ಯ ವಿಪತ್ತು ಪರಿಹಾರ ನಿಧಿ ಒಳಗಡೆ ಬರುತ್ತದೆ ಎಂದು ಹೇಳಿದೆ. ಎಲ್ಲ ಕೊರೋನ ವೈರಸ್ ಸೋಕಿನಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಹಾಗೂ ಎಲ್ಲ ಸೋಂಕಿತರಿಗೆ ಆಸ್ಪತ್ರೆಯ ವೆಚ್ಚವನ್ನು ಬರಿಸುವ ಷರತ್ತನ್ನು ಈ ಹೊಸದ ಅಧಿಸೂಚನೆಯಲ್ಲಿ ಅಳಿಸಲಾಗಿದೆ. ಈ ಹಿಂದಿನ ಅಧಿಸೂಚನೆಯಲ್ಲಿ ಪ್ರತ್ಯೇಕ ನಿಗಾ ಶಿಬಿರಗಳಲ್ಲಿರುವ ರೋಗಿಗಳು ಮತ್ತು ಜನರಿಗೆ ತಾತ್ಕಾಲಿಕ ವಸತಿ ಹಾಗೂ ಆಹಾರ, ನೀರು,ಬಟ್ಟೆ ಮತ್ತು ವೈದ್ಯಕೀಯ ನೆರವು ಒದಗಿಸುವುದು ಸರಕಾರವು ವಿವರಿಸಿದೆ. ಹೆಚ್ಚುವರಿ ಪರೀಕ್ಷಾ ಕೇಂದ್ರಗಳು,ಪೊಲೀಸರು,ಆರೋಗ್ಯ ರಕ್ಷಣೆ ಮತ್ತು ಮುನ್ಸಿಪಲ್ ಅಧಿಕಾರಿಗಳಿಗೆ ರಕ್ಷಣಾ ಉಪಕರಣಗಳು,ಸರಕಾರಿ ಆಸ್ಪತ್ರೆಗಳಿಗೆ ಥರ್ಮಲ್ ಸ್ಕಾನರ್ಗಳು ಮತ್ತು ಇತರ ಅಗತ್ಯ ಉಪಕರಣಗಳ ವೆಚ್ಚವನ್ನು ಪಾವತಿಸಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಹಣವನ್ನು ಬಳಸಿಕೊಳ್ಳಲಾಗುವುದು. ಇದಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯನ್ನು ಬಳಸಲಾಗುವುದಿಲ್ಲ. ಉಪಕರಣಗಳ ಒಟ್ಟು ವೆಚ್ಚ ನಿಧಿಯ ವಾರ್ಷಿಕ ಹಂಚಿಕೆಯ ಶೇ.10ನ್ನು ಮೀರುವಂತಿಲ್ಲ ಎಂದು ಸರಕಾರವು ತಿಳಿಸಿದೆ.
ಭಾರತದಲ್ಲಿ ಈವರೆಗೆ 80ಕ್ಕೂ ಅಧಿಕ ಕೊರೋನವೈರಸ್ ಪ್ರಕರಣಗಳು ದೃಢಪಟ್ಟಿವೆ. ಸೋಂಕಿಗೊಳಗಾಗಿದ್ದ ಕರ್ನಾಟಕದ ಕಲಬುರಗಿಯ ವೃದ್ಧರೋರ್ವರು ಗುರುವಾರ ಮತ್ತು ದಿಲ್ಲಿಯ ವೃದ್ಧೆಯೋರ್ವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
ಕೊರೋನವೈರಸ್ ಬಗ್ಗೆ ಮುಂಜಾಗ್ರತೆ ವಹಿಸಿರುವ ಕರ್ನಾಟಕ,ಮಹಾರಾಷ್ಟ್ರ, ಕೇರಳ,ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಾರ್ವಜನಿಕ ಸ್ಥಳಗಳು,ಶಾಲಾ ಕಾಲೇಜುಗಳು ಇತ್ಯಾದಿಗಳನ್ನು ಈಗಾಗಲೇ ಮುಚ್ಚಲಾಗಿದ್ದು,ಭಾರೀ ಪ್ರಮಾಣದಲ್ಲಿ ಸಮಾವೇಶಗಳನ್ನು ನಿಷೇಧಿಸಲಾಗಿದೆ. ಶನಿವಾರ ಪಶ್ಚಿಮ ಬಂಗಾಳ ಮತ್ತು ಗೋವಾ ರಾಜ್ಯಗಳೂ ಇಂತಹುದೇ ಕ್ರಮಗಳನ್ನು ಪ್ರಕಟಿಸಿವೆ.







