ಮಂಗಳೂರು ವಿವಿ ರಾಷ್ಟ್ರೀಯ ವಿಚಾರಸಂಕಿರಣ ಸಮಾರೋಪ

ಕೊಣಾಜೆ: ಪ್ರಸ್ತುತ ಸಂದರ್ಭದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಗೆ ಹಲವಾರು ಸವಾಲುಗಳು ಎದುರಾಗಿವೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಪ್ರಯತ್ನದ ಅನುಭವಗಳನ್ನು ಹೊಂದಿರುವ ಭಾರತ ಸದ್ಯಕ್ಕೆ ಮೇಕ್ ಇನ್ ಇಂಡಿಯಾ, ಫಿಟ್ ಇಂಡಿಯಾ ಹಾಗೂ ಸ್ಮಾರ್ಟ್ ಸಿಟಿಯಂತಹ ಹಲವಾರು ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿದ್ದು ಈ ಅಭಿವೃದ್ಧಿ ಪ್ರಯತ್ನದ ಯಶಸ್ಸಿನ ಬಗ್ಗೆ ಕಾತರದಲ್ಲಿದ್ದೇವೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞರಾದ ಪ್ರೊ.ಜಿ.ವಿ.ಜೋಶಿ ಅವರು ಹೇಳಿದರು.
ಅವರು ಮಂಗಳೂರು ವಿವಿಯ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಯ ಅನುಭವದ ಪುನರ್ ಚಿಂತನೆ ಎಂಬ ವಿಷಯದಲ್ಲಿ ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಸಮಾರೋಪ ಭಾಷಣ ಮಾಡಿದರು.
ಪರಿವರ್ತನೆಯ ಈ ಕಾಲಘಟ್ಟದಲ್ಲಿ ಭಾರತದ ಅಭಿವೃದ್ದಿಗಾಗಿ ಹಮ್ಮಿಕೊಂಡಿರುವ ಹಲವಾರು ಕಾರ್ಯಯೋಜನೆಗಳು ಯಶಸ್ವಿಯಾಗದಿದ್ದರೆ ವೈಫಲ್ಯಗಳೇ ಎದ್ದು ತೋರುವ ಸಾಧ್ಯತೆಗಳಿವೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರು ವಹಿಸಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಕಲಾವಿಭಾಗದ ಡೀನ್ ಪ್ರೊ.ಪಿ.ಎಲ್ .ಧರ್ಮ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಚಾರ ಸಂಕಿರಣದ ಸಂಯೋಜಕರು ಹಾಗೂ ವಿಭಾಗದ ಅಧ್ಯಕ್ಷರಾದ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಎರಡು ದಿನಗಳ ವಿಚಾರಸಂಕಿರಣದ ಸಾರಾಂಶವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ.ವಿಶ್ವನಾಥ, ಪ್ರೊ.ಅರಬಿ, ಡಾ. ವಜೀದಾ ಬಾನು, ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾರ್ಥಿನಿ ಜಿಮ್ಸ್ನಿ ವಂದಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಹೊಸದಿಲ್ಲಿಯಲ್ಲಿ ರಾಷ್ಟ್ರಮಟ್ಟದ ಅಮಿಟಿ ಪ್ರಶಸ್ತಿಗೆ ಭಾಜನರಾದ ಪ್ರೊ.ಶ್ರೀಪತಿ ಕಲ್ಲೂರಾಯ ಅವರನ್ನು ಸಂಶೋಧನಾ ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು.







