ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ನಿರ್ಲಕ್ಷ್ಯ : ಮೊಯಿದಿನಬ್ಬ
ಉಡುಪಿ, ಮಾ.15: ರಾಜ್ಯದ ಬಿಜೆಪಿ ನೇತೃತ್ವದ ಸರಕಾರವು 2020-2021 ನೇ ಸಾಲಿನ ಮುಂಗಡ ಪತ್ರದಲ್ಲಿ ಕಳೆದ ಸಾಲಿಗಿಂತ ಸುಮಾರು 744 ಕೋಟಿ ರೂ. ಕಡಿತಗೊಳಿಸುವ ಮೂಲಕ ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಸಮುದಾಯ ಗಳನ್ನು ನಿರ್ಲಕ್ಷಿಸಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಆರೋಪಿಸಿದ್ದಾರೆ.
ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧ ಸಮುದಾಯಗಳ ಕಲ್ಯಾಣದ ಹೊಣೆ ಹೊತ್ತಿರುವ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾದಿಭಾಗ್ಯ, ಕೌಶಲ್ಯ ತರಬೇತಿ, ಸೇನೆಯಲ್ಲಿ ತರಬೇತಿ ಪಡೆಯಲು ಪೂರ್ವ ಭಾವಿ ತರಬೇತಿ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ಟಡೀ ಕಿಟ್ ವಿತರಣೆ, ಮುಖ್ಯಮಂತ್ರಿಗಳ 9 ಅಂಶ ಕಾರ್ಯಕ್ರಮ, ವಿದ್ಯಾರ್ಥಿ ವೇತನ, ಅಲ್ಪಸಂಖ್ಯಾತರ ಆಶ್ರಮ, ವ್ರಧ್ಧಾಶ್ರಮ, ಸರಕಾರಿ ಉರ್ದು ಶಾಲೆಗಳಿಗೆ ಹೆಚ್ಚುವರಿ ಕೊಠಡಿ, ಶೌಚಾಲಯ ನಿರ್ಮಾಣ, ವಿದ್ಯಾರ್ಥಿ ನಿಲಯಗಳಿಗೆ ಮೂಲ ಸೌಕರ್ಯ, ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್ಗಳ ಮೂಲ ಸೌಕರ್ಯ ಸೇರಿದಂತೆ 13 ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಕೈಬಿಡ ಲಾಗಿದೆ. ಇದು ಈ ಸಮುದಾಯಗಳಿಗೆ ಮಾಡಿದ ಘೋರ ಅನ್ಯಾಯ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಅಲ್ಪಸಂಖ್ಯಾತ ಸಮುದಾಯದ ಪರ ಧ್ವನಿ ಎತ್ತಬೇಕು ಎಂದು ಮೊಯಿದಿನಬ್ಬ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.





