ದೇಶದಲ್ಲಿ ದಲಿತರ ಪರಿಸ್ಥಿತಿ ಚಿಂತಾಜನಕ: ಜಯನ್ ಮಲ್ಪೆ

ಉಡುಪಿ, ಮಾ.15: ದೇಶದಲ್ಲಿ ಕಾನೂನು ಇದ್ದರೂ ನ್ಯಾಯ ಇಲ್ಲ. ಅದೇ ರೀತಿ ಸಂವಿಧಾನ ಇದ್ದರೂ ಜನರಿಗೆ ರಕ್ಷಣೆ ಇಲ್ಲ. ಇಂದು ದೇಶದಲ್ಲಿ ದಲಿತರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಜನಪರ ಹೋರಾಟಗಾರ ಹಾಗೂ ದಲಿತ ಚಿಂತಕ ಜಯನ್ ಮಲ್ಪೆಹೇಳಿದ್ದಾರೆ.
ಕೆಮ್ಮಣ್ಣು ಪಡುಕುದ್ರು ಬಬ್ಬುಸ್ವಾಮಿ ದೈವಸ್ಥಾನದ ಸಭಾಂಗಣದಲ್ಲಿ ರವಿವಾರ ಅಂಬೇಡ್ಕರ್ ಯುವಸೇನೆಯ ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದಲಿತ ನಾಯಕರುಗಳು ಒಂದೇ ಕುಲದವರಾದರೂ ಒಟ್ಟಿಗೆ ಹೆಜ್ಜೆಹಾಕಲ್ಲ. ಇಂದಿನ ದಲಿತ ಚಳವಳಿಗೆ ಗುರಿ-ದಾರಿ ಯಾವುದೂ ಇಲ್ಲ. ಎಕೆಂದರೆ ನಮ್ಮಲ್ಲಿ ಆಡಂಬರ ಇದೆ, ಆದರೆ ಅಂಬೇಡ್ಕರ್ ಇಲ್ಲ. ಯಾವಾಗ ನಮ್ಮ ಹೃದಯದಲ್ಲಿ, ನರನಾಡಿನಲ್ಲಿ ಅಂಬೇಡ್ಕರ್ ವಿಚಾರಧಾರೆ ತುಂಬಿ ಹರಿಯುವುದೊ ಅಂದೇ ಈ ದೇಶದ ಅಧಿಕಾರ ನಮ್ಮದಾಗುತ್ತದೆ ಎಂದರು.
ದಲಿತ ವಿದ್ಯಾವಂತ ಜನಾಂಗ ಪ್ರಸ್ತುತ ವ್ಯವಸ್ಥೆಯ ವಿರುದ್ಧ ಘರ್ಜಿಸದೆ ಇರುವುದು ಮತ್ತು ಬಾಬಾ ಸಾಹೇಬರ ತತ್ವಗಳನ್ನು ಸಮಾಜಕ್ಕೆ ಹೇಳದೆ ದ್ರೋಹ ಮಾಡುತ್ತಿದೆ ಎಂದು ಅವರು ದೂರಿದರು.
ಮುಖ್ಯ ಅತಿಥಿಯಾಗಿ ಮಲ್ಪೆಪೊಲೀಸ್ ಠಾಣಾಧಿಕಾರಿ ಬಿ.ಎನ್.ತಿಮ್ಮೇಶ್ ಮಾತನಾಡಿ, ದಲಿತರು ಸುಶಿಕ್ಷಿತರಾಗಬೇಕು. ಯಾವುದೇ ಅಪರಾಧ ದಲ್ಲಿ ತೊಡಗಿಸಿಕೊಳ್ಳದೆ ಕಾನೂನಿಗೆ ಗೌರವಕೊಡಬೇಕು ಎಂದು ತಿಳಿಸಿದರು. ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ತೋನ್ಸೆ ಮಾತನಾಡಿ, ದಲಿತರಲ್ಲಿ ಆತ್ಮಗೌರವ ಮೂಡಿಸುವಲ್ಲಿ ಅಂಬೇಡ್ಕರ್ ಚಿಂತನೆ ಅಗತ್ಯ. ದೇಶದ ಸಂವಿಧಾನದ ಆಶಯಕ್ಕೆ ಧಕ್ಕೆಯಾದರೆ ಏಲ್ಲರಿಗೂ ಗಂಢಾಂತರ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ಅಂಬೇಡ್ಕರ್ ಯುವಸೇನೆಯ ಮಾರ್ಗದರ್ಶಿ ರಮೇಶ್ ಪಾಲ್, ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ, ಟಿ.ಸತೀಶ್ ಶಟ್ಟಿ, ಗುರುರಾಜ್ ಭಟ್, ತಾಪಂ ಸದಸ್ಯೆ ಸರೋಜ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ದಲಿತ ಮುಖಂಡರಾದ ಸುಂದರ್ ಕಪ್ಪೆಟ್ಟು, ಗಣೇಶ್ ನೆರ್ಗಿ, ಗ್ರಾಪಂ ಸದಸ್ಯರಾದ ಜನನಿಯಾ ಪಿಂಟೊ, ಕಡಂಜರ ಗುರಿಕಾರ, ಅಚ್ಚುತ್ತ ಗುರಿಕಾರ, ಸುಧಾಕರ್ ಉಪಸ್ಥಿತರಿದ್ದರು. ರಾಜೇಶ್ ಸ್ವಾಗತಿಸಿದರು. ಲತಾ ಪಡುಕುದ್ರು ವಂದಿಸಿದರು. ಜಯಕರ್ ಕಾರ್ಯಕ್ರಮ ನಿರೂಪಿಸಿದರು.








